Categories
Report

ಬಿಹಾರದಲ್ಲಿ  ‘‘ಧೈ ಅಖರ್ ಪ್ರೇಮ್’ ಸಾಂಸ್ಕೃತಿಕ ಮೆರವಣಿಗೆ ಜನರಲ್ಲಿ ಪ್ರೀತಿಯ ಸಂದೇಶವನ್ನು ಹರಡಿತು

Read in: हिन्दी | English | বাংলা | ಕನ್ನಡ | മലയാളം

‘‘ಧೈ ಅಖರ್ ಪ್ರೇಮ್’ ರಾಷ್ಟ್ರೀಯ ಸಾಂಸ್ಕೃತಿಕ ತಂಡವು ದೇಶದ ವಿವಿಧ ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳಾದ್ಯಂತ ಪ್ರೀತಿ, ಭ್ರಾತೃತ್ವ, ಸಮಾನತೆ, ನ್ಯಾಯ ಮತ್ತು ಮಾನವೀಯತೆಯ ಸಂದೇಶದ ಕೊಡುತ್ತಿರುವ  ಕಾಲ್ನಡಿಗೆ ಯಾತ್ರೆಯಾಗಿದೆ.  ಈ ಯಾತ್ರೆಯು 28 ಸೆಪ್ಟೆಂಬರ್ 2023 ರಿಂದ 30 ಜನವರಿ 2024 ರವರೆಗೆ ಸುಮಾರು 22 ರಾಜ್ಯಗಳ ಜನರೊಂದಿಗೆ ಸಂವಹನ ನಡೆಸುತ್ತದೆ. ಈ ರಾಷ್ಟ್ರೀಯ ಸಾಂಸ್ಕೃತಿಕ ಮೆರವಣಿಗೆಯ ಮೊದಲ ಹಂತವು 28 ಸೆಪ್ಟೆಂಬರ್ 2023 ರಂದು ಭಗತ್ ಸಿಂಗ್ ಅವರ ಜನ್ಮದಿನವಾದ ಅಲ್ವಾರ್ (ರಾಜಸ್ಥಾನ) ನಿಂದ ಪ್ರಾರಂಭವಾಯಿತು ಮತ್ತು ಮಹಾತ್ಮ ಗಾಂಧಿಯವರ ಜನ್ಮದಿನವಾದ 02 ಅಕ್ಟೋಬರ್ 2023 ರಂದು ಅಲ್ವಾರ್‌ನಲ್ಲಿ ಕೊನೆಗೊಂಡಿತು. ಅದೇ ಅನುಕ್ರಮದಲ್ಲಿ ಅಕ್ಟೋಬರ್ 03 ರಿಂದ 06 ರವರೆಗೆ ಛತ್ತೀಸ್‌ಗಢ, ಮಧ್ಯಪ್ರದೇಶ, ಜಾರ್ಖಂಡ್ ಮತ್ತು ಉತ್ತರ ಪ್ರದೇಶದಲ್ಲಿ ತಲಾ ಒಂದು ದಿನದ ಪಾದಯಾತ್ರೆಯ ನಂತರ, ಮೂರನೇ ಹಂತದ ಪಾದಯಾತ್ರೆಯು ಅಕ್ಟೋಬರ್ 8, 2023 ರಂದು ಬಿಹಾರದಲ್ಲಿ ಪಾಟ್ನಾದಲ್ಲಿ ಪ್ರಾರಂಭವಾಯಿತು.

07 ಅಕ್ಟೋಬರ್ 2023 ಶನಿವಾರ

ಬಿಹಾರದ ಗಾಂಧಿ ಮೈದಾನದಲ್ಲಿ ಅಕ್ಟೋಬರ್ 07 2023 ರಂದು “ಧೈ ಅಖರ್ ಪ್ರೇಮ್” ರಾಷ್ಟ್ರೀಯ ಸಾಂಸ್ಕೃತಿಕ ಜಾತಾದ ಪ್ರಾರಂಭವಾಯಿತು. ಪ್ರಾರಂಭದಲ್ಲಿ ಸಭಿಕರನ್ನುದ್ದೇಶಿಸಿ ಮಾತನಾಡಿದ ಇಪ್ಟಾ ರಾಷ್ಟ್ರೀಯ ಕಾರ್ಯಾಧ್ಯಕ್ಷ ರಾಕೇಶ್, ‘ಈ ಪಯಣದೊಂದಿಗೆ ನಾವು ಬಾಪು, ಕಬೀರ್, ರಹೀಮ್, ರಸ್ಖಾನ್ ಅವರ ‘ಹೆಜ್ಜೆ’ ಮತ್ತು ‘ಗುರುತು’ಗಳನ್ನು ಅನುಸರಿಸುವ ಮೂಲಕ ಪ್ರಯಾಣಿಸುತ್ತಿದ್ದೇವೆ. ಈ ಪಯಣದಲ್ಲಿ, ಬಾಪು ಅವರ ಚಂಪಾರಣ್ ಸತ್ಯಾಗ್ರಹದ ಮಾರ್ಗವನ್ನು ಅನುಸರಿಸಲು ಪ್ರಯತ್ನಿಸಲಾಗುತ್ತಿದೆ, ಏಕೆಂದರೆ ದೇಶವು ಚಂಪಾರಣ್ ಮತ್ತು ಗಾಂಧಿ ಇಬ್ಬರನ್ನೂ ಹುಡುಕುತ್ತಿದೆ.  ಭಯದ ವಾತಾವರಣವನ್ನು ಸೃಷ್ಟಿಸಿ ತನ್ನ ಗುರಿಯನ್ನು ಈಡೇರಿಸಿಕೊಳ್ಳುವವರ ಬಲವಂತದ ವಿರುದ್ಧ ಪ್ರೀತಿ ಮತ್ತು ಸಹೋದರತ್ವದ ಅಭಿಯಾನದಲ್ಲಿ ಬ್ರಿಟಿಷರಿಂದ ಇಂಡಿಗೋ ಬೆಳೆಯುವ ಮೂರು ಕೆಟ್ಟ ಕಾನೂನು ಮುರಿದು ಸೂರ್ಯ ಮುಳುಗದ ಆ ಸಾಮ್ರಾಜ್ಯಕ್ಕೆ ತಲೆಬಾಗುವಂತೆ ಮಾಡಿದ್ದ ಅದೇ ಗಾಂಧಿಯನ್ನು ಹುಡುಕಲಾಗುತ್ತಿದೆ.

‘’‘ಧೈ ಅಖರ್ ಪ್ರೇಮ್’ ಪಾದಯಾತ್ರೆ ಬಿಹಾರ ರಾಜ್ಯದ ಬಂಕಿಪುರ ಜಂಕ್ಷನ್‌ನಿಂದ (ಪಾಟ್ನಾ ಜಂಕ್ಷನ್) ಪ್ರಾರಂಭವಾಯಿತು. ಏಪ್ರಿಲ್ 1917ರಲ್ಲಿ, ಗಾಂಧೀಜಿ ಇದೇ ಸ್ಥಳದಲ್ಲಿ ಮೊದಲ ಬಾರಿಗೆ ಬಿಹಾರಕ್ಕೆ ಬಂದ ನಂತರ ಮುಜಾಫರ್ಪುರದ ಮೂಲಕ ಚಂಪಾರಣ್ ತಲುಪಿದ್ದರು. ಚಂಪಾರಣ್‌ನಲ್ಲಿಯೇ ಸ್ವಾತಂತ್ರ್ಯ ಹೋರಾಟದ ಹಾದಿಯನ್ನು ತೆರೆದಿದ್ದರು.

ಪಾಟ್ನಾ ಜಂಕ್ಷನ್‌ನಿಂದ ಆರಂಭವಾದ ಪಾದಯಾತ್ರೆಯು ಹುತಾತ್ಮ ಭಗತ್ ಸಿಂಗ್ ಮತ್ತು ಮಹಾತ್ಮ ಗಾಂಧಿಯವರ ಪ್ರತಿಮೆಗಳಿಗೆ ಮಾಲಾರ್ಪಣೆ ಮಾಡಿ, ಪಾಟ್ನಾ ಯೂತ್ ಹಾಸ್ಟೆಲ್ ಮೂಲಕ ಸಾಗಿ, ಭಿಖಾರಿ ಠಾಕೂರ್ ರಂಗಭೂಮಿ ತಲುಪಿ, ಅಲ್ಲಿ ಭವ್ಯ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಪ್ರಸ್ತುತಪಡಿಸಲಾಯಿತು. ಮೆರವಣಿಗೆಯಲ್ಲಿ ಪಾಲ್ಗೊಂಡಿದ್ದ ಜನರು ‘ತು ಖುದ್ ಕೋ ಬಾದಲ್, ತೋ ಜಮಾನ ಬದ್ಲೇಗಾ’ ಎಂದು ಹಾಡುತ್ತಾ ಸಾಗುತ್ತಿದ್ದರು.  ನಂತರ   ಎಲ್ಲಾ ಜನರು   ‘ಧೈ ಅಖರ್ ಪ್ರೇಮ್ ಎಂಬ ಘೋಷಣೆಗಳನ್ನು ಕೂಗುತ್ತಿದ್ದರು.

ಖ್ಯಾತ ವೈದ್ಯ ಡಾ. ಸತ್ಯಜಿತ್, ಪ್ರಗತಿಶೀಲ ಲೇಖಕರ ಸಂಘದ ಸುನೀಲ್ ಸಿಂಗ್, ಲೋಕ ಪರಿಷತ್ತಿನ ರೂಪೇಶ್, ಬಿಹಾರ ರಾಜ್ಯ ಪ್ರಧಾನ ಕಾರ್ಯದರ್ಶಿ ಫಿರೋಜ್ ಅಶ್ರಫ್ ಖಾನ್ ಸಾಂಸ್ಕೃತಿಕ ಸಂವಾದದಲ್ಲಿ ಮಾತನಾಡಿದರು. ಛತ್ತೀಸ್‌ಗಢದ ನೃತ್ಯ ಜಾನಪದ ರಂಗಭೂಮಿ ಕಲಾವಿದರು ಗಮ್ಮತ್ ನಾಟಕ ಪ್ರಸ್ತುತಪಡಿಸಿದರು. ಯುವ ಯಾತ್ರಿಗಳು ಕಬೀರ್ ಅವರ ಪದ್ಯಗಳನ್ನು ಆಧರಿಸಿ ಭಾವನಾತ್ಮಕ ನೃತ್ಯವನ್ನು ಪ್ರಸ್ತುತಪಡಿಸಿದರು.

ಪ್ರೀತಿ, ಭ್ರಾತೃತ್ವ, ನ್ಯಾಯ, ಸಮಾನತೆ ಮತ್ತು ಮಾನವೀಯತೆಯ ಸಂದೇಶದೊಂದಿಗೆ ‘‘ಧೈ  ಅಖರ್ ಪ್ರೇಮ್ ಪಾದಯಾತ್ರೆ ಜಸೌಲಿ ಪಟ್ಟಿಯನ್ನು ತಲುಪಿತು. ಮುಂದಿನ ಏಳು ದಿನಗಳ ಕಾಲ ಹಲವು ಗ್ರಾಮಗಳ ಜನರನ್ನು ಭೇಟಿ ಮಾಡಿ ಈ ಪಾದಯಾತ್ರೆ ನಡೆಯಲಿದೆ.  14 ಅಕ್ಟೋಬರ್ 2023 ರಂದು ಮೋತಿಹಾರಿ ಗಾಂಧಿ ಸ್ಮಾರಕ ಸಂಕೀರ್ಣದಲ್ಲಿ ಸಾರ್ವಜನಿಕ ಸಭೆಯನ್ನು ಆಯೋಜಿಸುವ ಮೂಲಕ ಇದನ್ನು ಮುಕ್ತಾಯಗೊಳಿಸುವ ಯೋಜನೆಯಾಗಿತ್ತು. “‘ಧೈ ಅಖರ್ ಪ್ರೇಮ್: ರಾಷ್ಟ್ರೀಯ ಸಾಂಸ್ಕೃತಿಕ ಜಾತಾದಡಿಯಲ್ಲಿ ಬಿಹಾರದ ರಂಗಕರ್ಮಿಗಳು, ಬರಹಗಾರರು, ಕವಿಗಳು, ನಟರು, ಗಾಯಕರು ಮತ್ತು ಸಾಮಾಜಿಕ ಕಾರ್ಯಕರ್ತರು ಮೆರವಣಿಗೆಯಲ್ಲಿ ಭಾಗವಹಿಸಿದರು. ಪಾದಯಾತ್ರೆಯಲ್ಲಿ ನಾಟಕ, ಹಾಡು, ನೃತ್ಯ ಮತ್ತು ಜನಪ್ರಿಯ ಸಂವಾದದ ಮೂಲಕ ನಾಗರಿಕರೊಂದಿಗೆ ನೇರ ಸಂವಾದ ನಡೆಸಲಾಯಿತು.

08 ಅಕ್ಟೋಬರ್ 2023 ಭಾನುವಾರ

ಅಕ್ಟೋಬರ್ 8 ರಂದು ಮುಜಾಫರ್‌ಪುರದ ಲೋಕನಾಯಕ ಜೈಪ್ರಕಾಶ್ ನಾರಾಯಣ್ ಪಾರ್ಕ್ ಮೂಲಕ ಸಾಗಿ ಛಾತಾ ವೃತ್ತನಲ್ಲಿ ನಿಲ್ಲಿಸಿ ಪುಷ್ಪ ನಮನ ಸಲ್ಲಿಸುವ ವೇಳೆ ತಂಡದಲ್ಲಿದ್ದ ರಂಗಭೂಮಿ ಕಲಾವಿದರು ಹಾಡುಗಳನ್ನು ಪ್ರಸ್ತುತಪಡಿಸಿದರು.  ಆ ನಂತರ ಜಾತಾ ಮುಂದುವರೆದು ಲಂಘತ್ ಸಿಂಗ್ ಕಾಲೇಜು ತಲುಪಿತು. ಅಲ್ಲಿ ಗಾಂಧಿ ಸ್ಮಾರಕಕ್ಕೆ ಪುಷ್ಪನಮನ ಸಲ್ಲಿಸಲಾಯಿತು. ಗಾಂಧೀಜಿಯವರು ಚಾಂಪಹರಣಕ್ಕೆ ಹೋಗುವ ಮೊದಲು ಸ್ನಾನ ಇತ್ಯಾದಿ ದೈನಂದಿನ ಕೆಲಸವನ್ನು ಅಲ್ಲಿಯೇ ಮಾಡಿದ್ದು ಅದು ಈ ಸ್ಥಳದ ಪ್ರಾಮುಖ್ಯೆತೆಯಾಗಿದೆ 

ಪ್ರೀತಿ, ಭ್ರಾತೃತ್ವ, ನ್ಯಾಯ, ಸಮಾನತೆ ಮತ್ತು ಮಾನವೀಯತೆಯ ಸಂದೇಶದೊಂದಿಗೆ, ಬಿಹಾರದ ಸಾಂಸ್ಕೃತಿಕ ತಂಡವು ಸ್ಥಳೀಯ ಜನರೊಂದಿಗೆ ಬೆರೆತು, ಅವರಿಂದ ಕಲಿಯುತ್ತಾ, ಹಾಡುತ್ತಾ, ನುಡಿಸುತ್ತಾ ಮುನ್ನಡೆಯುತ್ತಲೇ ಇತ್ತು.  ಜಾತಾದ ಸಂಗಾತಿಗಳು ಹಾಡನ್ನು ಹಾಡುತ್ತಿದ್ದರು    “‘‘ಧೈ ಅಖರ್ ಪ್ರೇಮ್ ಕೆ ಪಡನೆ ಔರ್ ಪಡಾನೇ ಆಏ ಹೈ, ಹಮ್ ಭಾರತ್ ಸೆ ನಾಫರಾತ್ ಕ ಹರ್ ದಾಗ್ ಮಿತಾನೆ ಆಏ ಹೈ.’  ಇದು ಬಹಳಷ್ಟು ಮೆಚ್ಚುಗೆ ಪಡೆಯುತ್ತಿದೆ.  ಬಿಹಾರದ ಗುಂಪಿನಲ್ಲಿ ಸೇರಿದ್ದ ಒಡನಾಡಿಗಳು ಗಾಂಧಿ, ಕಬೀರ್, ರೈದಾಸ್, ಅಂಬೇಡ್ಕರ್, ಭಗತ್ ಸಿಂಗ್ ಮತ್ತು ಸೂಫಿ ಮತ್ತು ಸಂತ ಕವಿಗಳ ಪ್ರೀತಿಯ ಪರಂಪರೆಯನ್ನು ಜನರಿಗೆ ತಂದರು. ಜಾತಾದ ಸಹಚರರು ದಾರಿಯುದ್ದಕ್ಕೂ ಜನರಿಂದ ಪ್ರೀತಿ ಮತ್ತು ಬೆಂಬಲವನ್ನು ಪಡೆದರು. ಈ ಪ್ರಯಾಣದ ಉದ್ದೇಶ ಪ್ರೀತಿಯ ಜೊತೆಗೆ ಶ್ರಮದ ಹಾಡುಗಳನ್ನು ಹಾಡುವುದಾಗಿತ್ತು. ಅನೇಕ ಸ್ಥಳಗಳಲ್ಲಿ, ಜನರು ಪ್ರೀತಿ ಮತ್ತು ಗೌರವವನ್ನು ವ್ಯಕ್ತಪಡಿಸಲು ಗಮ್ಚಾಗಳನ್ನು ಹಾಕಲಾಗುತ್ತಿತ್ತು. ಕಬೀರನ  ನೇಯ್ಗೆಯಿಂದ ಮಾಡಿದ ಚಾದರಗಳು ಮತ್ತು ಶಾಲುಗಳು ನಮ್ಮ ಕಾರ್ಮಿಕರ ಗುರುತು. ಶ್ರಮದಲ್ಲಿಯೂ ಪ್ರೀತಿಯ ಅಂಶ ಅಡಗಿದೆ ಎಂಬುವುದಕ್ಕೆ ನಮ್ಮ ದೇಶವು ಪುರಾತನ ಸಾಂಸ್ಕೃತಿಕ ಮತ್ತು ಸಾಮಾಜಿಕ ಗುರುತು.  ಇದೇ  ಸಂದೇಶವನ್ನು ಜನರಿಗೆ ತಲುಪಿಸುವುದು ಈ ಜಾತಾದ ಉದ್ದೇಶವಾಗಿತ್ತು.

ಜಾತಾ ಮುಜಾಫರ್‌ಪುರದಿಂದ ಪ್ರಾರಂಭವಾಗಿ ಜಮಾಲಾಬಾದ್ ಆಶ್ರಮಕ್ಕೆ (ಮುಸಾಹರಿ ಬ್ಲಾಕ್) ತಲುಪಿತು. ಅಲ್ಲಿ ‘ಜೈ ಪ್ರಕಾಶ್ ಪ್ರಭಾವತಿ ಮುಸಾಹರಿ ಪ್ರವಾಸ ಸ್ವರ್ಣ ಜಯಂತಿ ಸಂವಾದ  ಸಮಾರೋಪಗೊಳ್ಳುತ್ತಿತ್ತು. ಅಲ್ಲಿ ಜಾತಾದ ಸಂಗಾತಿಗಳು ಅವರನ್ನು ಭೇಟಿಯಾದರು ಮತ್ತು ಪರಸ್ಪರ ಸಂಭಾಷಣೆಯ ಮೂಲಕ ತಮ್ಮ ಉದ್ದೇಶಗಳನ್ನು ವಿನಿಮಯ ಮಾಡಿಕೊಂಡರು. ಇಪ್ಟಾದ ರಾಷ್ಟ್ರೀಯ ಕಾರ್ಯಾಧ್ಯಕ್ಷ ರಾಕೇಶ್ ಮಾತನಾಡಿ  ‘ಲೋಕನಾಯಕ್ ಜಯಪ್ರಕಾಶ್ ಜಿ ಅವರ ಪ್ರಯಾಣದ ಸಮಾರೋಪದಲ್ಲಿ ಈ ಜಾತಾ ಜಮಾಲಾಬಾದ್‌ನಲ್ಲಿ ಸಭೆ ಸೇರುತ್ತಿದೆ. ಆದ್ದರಿಂದ  ಇಲ್ಲಿ  ಐತಿಹಾಸಿಕ ವಾತಾವರಣವನ್ನು ಸೃಷ್ಟಿಯಾಗುತ್ತಿದೆ. ಒಂದು ಪ್ರಯಾಣದ ಸಮಾಪ್ತಿ, ಮತ್ತೊಂದರ ಆರಂಭವು ನಮ್ಮ ಸಂಪ್ರದಾಯವನ್ನು ಮರೆಯಬಾರದು ಎಂದು ನಮಗೆ ಕಲಿಸುವ ಹಂತವಾಗಿದೆ,  ಆ ರೀತಿಯಲ್ಲಿ ಸಂಸ್ಕೃತಿಯ ಸರಪಳಿಯು  ನಮ್ಮನ್ನು ಕೂಡಿಟ್ಟು   ಅದು ನಮ್ಮ  ಸಾಮೂಹಿಕ ಸಂಸ್ಕೃತಿಯನ್ನು ಜೀವಂತವಾಗಿರಿಸುವುದು ಮಾತ್ರವಲ್ಲದೇ ಇದು ಅವುಗಳನ್ನು ಮತ್ತಷ್ಟು ಬಲಶಾಲಿಗೊಳಿಸುತ್ತವೆ. ಇದು ಪ್ರೀತಿಯ ನಿರಂತರ ಹರಿವು, ಇದು ಎಲ್ಲಿಯೂ ಒಣಗುವುದಿಲ್ಲ ಮತ್ತು ನಾವು ಅದನ್ನು ಒಣಗಲು ಬಿಡುವುದಿಲ್ಲ; ಏಕೆಂದರೆ ಅದು ಒಣಗುವುದು ಯಾವುದೇ ದೇಶದ ಆತ್ಮಹತ್ಯೆಗೆ ಸಮಾನ.  ನಮ್ಮ ಸಂಕಲ್ಪವೇನೆಂದರೆ  ನಾವು ಗ್ರಾಮದ ಕೂಲಿಕಾರ್ಮಿಕರು, ರೈತರು, ಮಹಿಳೆಯರು ಮುಂತಾದವರ ಹೋರಾಟಗಳು ಮತ್ತು ಅವರ ಹಾಡುಗಳನ್ನು ಒಟ್ಟುಗೂಡಿಸಿ ನಾವು ಸಮತೆ, ಸಮಾನತೆ ಮತ್ತು ಸಹೋದರತ್ವದ ಆಧಾರದ ಮೇಲೆ ಸಮಾಜವನ್ನು ನಿರ್ಮಿಸುವುದು. ಜನರಿಂದ ಕಲಿಯುವ ಮೂಲಕ ನಾವು ಈ ಪ್ರಯಾಣವನ್ನು ಮುಂದುವರಿಸುತ್ತೇವೆ.

“‘ಧೈ ಅಖರ್ ಪ್ರೇಮ್ ” ಸಂದೇಶದೊಂದಿಗೆ ಸಾಂಸ್ಕೃತಿಕ ಮೆರವಣಿಗೆ ಪೂರ್ವ ಚಂಪಾರಣ್ ತಲುಪಿತು.  ರಾತ್ರಿ ಜಾತಾ ಜಸೌಲಿ ಪಟ್ಟಿ ಗ್ರಾಮದ ಒಂದು ಭಾಗದ ಮೂಲಕ ಹಾದು ರಾಷ್ಟ್ರೀಯ ಮಧ್ಯಮ ವಿದ್ಯಾಲಯ ಜಸೌಲಿ ಬ್ಲಾಕ್ ಕೋಟ್ವಾ ಪೂರ್ವ ಚಂಪಾರಣ್ ತಲುಪಿತು, ಅಲ್ಲಿ ಜಾತಾದ ಜನರು ರಾತ್ರಿ ವಿಶ್ರಾಂತಿ ಪಡೆದರು. ಅದಕ್ಕೂ ಮುನ್ನ ಇಲ್ಲಿನ ಗ್ರಾಮದ ದೊಡ್ಡ ಮೈದಾನದಲ್ಲಿ ಸಾಂಸ್ಕೃತಿಕ ಕಾರ್ಯಕ್ರಮವೂ ನಡೆಯಿತು.  ಗ್ರಾಮಕ್ಕೆ ಆಗಮಿಸಿದ ತಂಡದ ಸಂಗಡಿಗರನ್ನು ಗ್ರಾಮಸ್ಥರು ಸ್ವಾಗತಿಸಿದರು.  ಜಾಥಾವನ್ನು ಸ್ವಾಗತಿಸಲು ಜನರು ತಮ್ಮ ಮನೆಗಳಿಂದ ಹೊರಬರುತ್ತಿದ್ದರು.  ಹಾಡುಗಳು ಮತ್ತು ಸಂಗೀತದ ಜೊತೆಗೆ ಪ್ರಯಾಣದ ಮಹತ್ವವನ್ನು ಪ್ರತಿ ತಿರುವಿನಲ್ಲಿಯೂ ಜನರಿಗೆ ತಿಳಿಸಲಾಯಿತು.

ಪರಿಸರ ಕ್ಷೇತ್ರದಲ್ಲಿ ಕೆಲಸ ಮಾಡುತ್ತಿರುವ  ಸ್ಥಳೀಯ ನಿವಾಸಿ ವಿನಯ್ ಕುಮಾರ್ ಅವರು ಇಡೀ ತಂಡವನ್ನು ಸ್ವಾಗತಿಸಿದ್ದು ಮಾತ್ರವಲ್ಲದೆ ಶಾಲಾ ಆವರಣದಲ್ಲಿ ನಡೆಯುವ ರಾತ್ರಿ ಕಾರ್ಯಕ್ರಮದಲ್ಲಿ ಭಾಗವಹಿಸುವಂತೆ ಪ್ರೇರೇಪಿಸಿದರು. ಗ್ರಾಮದಲ್ಲಿ ಸುತ್ತಾಡಿದ ಜಾತಾ ಶಾಲೆಗೆ ಆಗಮಿಸಿ ಸಾಂಸ್ಕೃತಿಕ ಕಾರ್ಯಕ್ರಮ ಆಯೋಜಿಸಿತು. ಗ್ರಾಮಸ್ಥರು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಂಡಿದ್ದರು. ಹೆಚ್ಚಿನ ಸಂಖ್ಯೆಯಲ್ಲಿ ಮಕ್ಕಳು ಮತ್ತು ಮಹಿಳೆಯರು ಸೇರಿದ್ದರು. ಎರಡೂವರೆ ಗಂಟೆಗಳ ಕಾಲ ಹಾಡು, ಸಂಗೀತ, ನಾಟಕ, ಸಂವಾದ ಕಾರ್ಯಕ್ರಮ ನಡೆಯಿತು. ಪ್ರಮುಖವಾಗಿ ಮಕ್ಕಳ ಭಾಗವಹಿಸುವಿಕೆ ತಮ್ಮ ಜಾತಾದ ಸಹೋದ್ಯೋಗಿಗಳೊಂದಿಗೆ ವೇದಿಕೆ ಕಾರ್ಯಕ್ರಮಗಳಲ್ಲಿ ಭಾಗಿಯಾಗುತ್ತಿದ್ದರು.

ವಿನಯ್ ಕುಮಾರ್ ವೇದಿಕೆಯಿಂದ ಸ್ವಾಗತಿಸಿ ಗ್ರಾಮದ ಐತಿಹಾಸಿಕತೆಯನ್ನು ಜನರಿಗೆ ತಿಳಿಸಿದರು. ಕಾರ್ಯಕ್ರಮದಲ್ಲಿ ಗ್ರಾಮದ ರಾಮಶ್ರೇಷ್ಠ ಬೈದ, ಸುನೀಲ್ ದಾಸ್, ದಿಲೀಪ್ ಠಾಕೂರ್, ಉಪೇಂದ್ರ ಕುಮಾರ್, ಮಂಕೇಶ್ವರ ಪಾಂಡೆ, ಜುಲುಮ್ ಯಾದವ್ (ಪಿಎಸಿಎಸ್ ಅಧ್ಯಕ್ಷರು), ರಾಮ್ ಜಿ ರೈ, ಹರೇಂದ್ರ ಕುಮಾರ್, ಜಿತೇಂದ್ರಕುಮಾರ್ ಪ್ರಮುಖ ಪಾತ್ರ ವಹಿಸಿದ್ದರು.

ಲಕ್ಷ್ಮೀಪ್ರಸಾದ್ ಯಾದವ್ ಅವರ ಗಾಯನದೊಂದಿಗೆ ಸಾಂಸ್ಕೃತಿಕ ಕಾರ್ಯಕ್ರಮ ಆರಂಭವಾಯಿತು. ‘ಬಡೇ ಚಲೋ ಜವಾನ್ ತುಮ್ ಬಡೇ ಚಲೋ’ ಹಾಡು ಸಾಕಷ್ಟು ಮೆಚ್ಚುಗೆ ಗಳಿಸಿತು. ಅದರ ನಂತರ ಅವರು ಚಂದ್ರಶೇಖರ್ ಪಾಠಕ್ ಭಾರದ್ವಾಜ್ ಅವರು ಬರೆದ ‘ಕೈಸೆ ಜಬೇಂಗೆ ಸಜ್ನಿಯಾ ಪಹಾಡ್ ತೋಡೆ ಲಾ, ಹಮ್ರಾ ಅಂಗುಲಿ ಸೆ ಖುನ್ವಾ ಕಿ ಧರ್ ಬಹೇ ಲಾ’ ಎಂಬ ಎರಡನೇ ಹಾಡನ್ನು ಪ್ರಸ್ತುತಪಡಿಸಿದರು. ಅಮರನಾಥ್ ಹಾರ್ಮೋನಿಯಂನೊಂದಿಗೆ  ಜೊತೆಗಿದ್ದರು. ಶಿವಾನಿ ಗುಪ್ತಾ ಹಳ್ಳಿ ಮಕ್ಕಳೊಂದಿಗೆ ಹಾಡುವ ಮೂಲಕ ಎರಡನೇ ಹಾಡನ್ನು ಪ್ರಸ್ತುತಪಡಿಸಿದರು – ‘ಹಮ್ ಹೇ ಇಸ್ಕೆ ಮಾಲಿಕ್, ಹಿಂದೂಸ್ತಾನ್ ಹಮಾರಾ ಹೈ’. ಎರಡನೆಯ ಹಾಡು – ‘ರೆಲಿಯಾ ಬೇರ್ನ್ ಪಿಯಾ ಕೋ ಲಿಯೇ ಜಾಯೆ ರೇ, ರೆಲಿಯಾ ಬೈರ್ನ್…’. ಶಿವಾನಿ ಕಜಾರಿಯಾ ‘ಕೈಸೆ ಖೇಲೆ ಜೈಬೂ ಸಾವನ್ ಮೇ ಕಜಾರಿಯಾ, ಬದರಿಯಾ ಘಿರಿ ಐಲ್ ನಂದಿ’ ಹಾಡುವ ಮೂಲಕ ಜನರನ್ನು ಮಂತ್ರಮುಗ್ಧಗೊಳಿಸಿದರು.

ಇದಾದ ಬಳಿಕ ರಾಷ್ಟ್ರೀಯ ಕಾರ್ಯಾಧ್ಯಕ್ಷ ರಾಕೇಶ್ ಅವರು ಜನರನ್ನುದ್ದೇಶಿಸಿ ಈ ಜಾತಾದ ಉದ್ದೇಶದ ಕುರಿತು ಮಾತನಾಡಿದರು. ವಿಶ್ವ ಭೂಪಟದಲ್ಲಿ ಕ್ರಾಂತಿಕಾರಿ ಗ್ರಾಮಗಳಲ್ಲಿ ಜಸೌಲಿ   ಅತ್ಯುನ್ನತ ಸ್ಥಾನವಿದೆ ಎಂದರು.  ಚಾರ್ಲಿ ಚಾಪ್ಲಿನ್ ಜೊತೆ ಗಾಂಧೀಜಿಯವರ ಭೇಟಿಯನ್ನು ಉಲ್ಲೇಖಿಸುವಾಗ, ಕಲೆಯ ಅರ್ಥವೇನು? ಹಾಡು ಮತ್ತು ಸಂಗೀತದ ಅರ್ಥವೇನು?’ ಗಾಂಧಿಯವರು ಚಾಪ್ಲಿನ್ ಅವರನ್ನು ಕೇಳಿದಾಗ. ‘ಹಾಡು, ಸಂಗೀತ ಮತ್ತು ಕವಿತೆ ಎಂದರೆ ಸಾರ್ವಜನಿಕರಿಗೆ ಪ್ರೇಮದ ಪತ್ರ. ಇದು ಸರ್ಕಾರದ ವಿರುದ್ಧದ ದೋಷಾರೋಪಣೆಯೂ ಹೌದು. ಎಂದು ಚಾಪ್ಲಿನ್ ಗಾಂಧೀಜಿಯವರಿಗೆ ಉತ್ತರಿಸಿದ್ದರಂತೆ.

ಅದರ ನಂತರ ಹಿಮಾಂಶು ಮತ್ತು ಅವರ ಸ್ನೇಹಿತರು, ‘ಗಂಗಾ ಕಿ ಕಸಮ್, ಯಮುನಾ ಕಿ ಕಸಮ್, ಯೇ ತನ-ಬಾನಾ ಬದ್ಲೇಗಾ, ತು ಚುಡ್ ಕೋ ಬದ್ಲೇಗಾ, ತಬ್ ತು ಯೇ ಜಮಾನ ಬದ್ಲೇಗಾ’ ಹಾಡನ್ನು ಪ್ರಸ್ತುತಪಡಿಸಿದರು. ಮುಂದಿನ ಪ್ರಸ್ತುತಿಯಲ್ಲಿ ಜಾಥಾದ ಸದಸ್ಯ ಮನೋಜ್ ಭಾಯ್ ಅವರು ಮಕ್ಕಳ ಮುಂದೆ ಕೈ ಚಳಕ ಪ್ರದರ್ಶಿಸಿ ಮಾಟ ಮಂತ್ರ ಇಲ್ಲ ಕೈ ಚಳಕ ಮಾತ್ರ ಇದೆ ಎಂಬ ಸಂದೇಶವನ್ನು ಜನರಿಗೆ ನೀಡಿದರು. ಬಳಿಕ ಕಬೀರರ ದ್ವಿಪದಿಗಳನ್ನು ನೃತ್ಯದ ಮೂಲಕ ಪ್ರಸ್ತುತಪಡಿಸಲಾಯಿತು. ಕೊನೆಯ ಪ್ರಸ್ತುತಿ ನಿಸಾರ್ ಅಲಿ ಮತ್ತು ಛತ್ತೀಸ್‌ಗಢದ ಗೆಳೆಯರಿಂದ ‘ಟಾರ್ಚ್ ಬೆಚ್ಚಯ್ಯ’ ನಾಟಕ ಪ್ರದರ್ಶನವಾಗಿತ್ತು.  ಇದು ಛತ್ತೀಸ್‌ಗಢದ ನಾಚಾ-ಗಮ್ಮತ್ ಶೈಲಿಯಲ್ಲಿತ್ತು, ಅದರ ಹೊಸತನದಿಂದಾಗಿ ಹಳ್ಳಿಗರು ಇದನ್ನು ತುಂಬಾ ಇಷ್ಟ ಪಟ್ಟರು.

09 ಅಕ್ಟೋಬರ್ 2023 ಸೋಮವಾರ

ಬೆಳಗ್ಗೆ ಜಸೌಲಿ ಮಾಧ್ಯಮಿಕ ಶಾಲೆಯಿಂದ ಹೊರಟು ಯಾತ್ರೆ ಗ್ರಾಮದ ಮೂಲಕ ಸಾಗಿತು. ಜಸೌಲಿ ಪಟ್ಟಿ ಗ್ರಾಮವು 09-10 ಕಿಲೋಮೀಟರ್‌ಗಳಷ್ಟು ಹರಡಿರುವ ಒಂದು ದೊಡ್ಡ ಗ್ರಾಮವಾಗಿರುವುದರಿಂದ. ಇಲ್ಲಿ ಜನಸಂಖ್ಯೆಯು ಸುಮಾರು 10.000 ಆಗಿದೆ. ಇಲ್ಲಿ 12 ವಾರ್ಡ್ ಗಳಿದ್ದು, ಎಲ್ಲ ಜಾತಿಯ ಜನರು ವಾಸಿಸುತ್ತಿದ್ದಾರೆ. ಅಲ್ಲಿ ಮುಸ್ಲಿಂ ಒಂದು ಕುಟುಂಬವೂ ವಾಸವಾಗಿದೆ. ಗ್ರಾಮದ ಎಲ್ಲ ಜನರಲ್ಲೂ ಸಹಕಾರ ಮನೋಭಾವನೆ ಇದೆ. ಇಲ್ಲಿ ಯಾವುದೇ ಜನಾಂಗೀಯ ಅಥವಾ ಧಾರ್ಮಿಕ ಉದ್ವಿಗ್ನತೆ ಇಲ್ಲ. ಮೂಲ ಆರ್ಥಿಕ ಆಧಾರವೆಂದರೆ ಕೃಷಿ; ಕೆಲವು  ಜನರು ಹೊರಗೆ ವಾಸಿಸುತ್ತಿದ್ದರೂ ಉದ್ಯೋಗದಲ್ಲಿ ತೊಡಗಿಸಿಕೊಂಡಿದ್ದಾರೆ. ಜಾತಾದ ಬಗ್ಗೆ ಜನರಲ್ಲಿ ಹೆಚ್ಚಿನ ಉತ್ಸಾಹವಿತ್ತು. ಸುತ್ತಲೂ ಗದ್ದೆಗಳಲ್ಲಿ ಭತ್ತ, ಜೋಳ ಬೆಳೆದಿದ್ದವು. ಇಲ್ಲಿ ತರಕಾರಿ ಕೃಷಿಯೂ ದೊಡ್ಡ ಪ್ರಮಾಣದಲ್ಲಿ ನಡೆಯುತ್ತದೆ.

ಜಾತಾ ಬೆಳಿಗ್ಗೆ ಶಾಲೆಯಿಂದ ಹೊರಟಾಗ ನಿಸಾರ್ ಅಲಿ ಅವರು ತಮ್ಮ ಗೆಳೆಯರೊಂದಿಗೆ ‘ಮಶಾಲೆನ್ ಲೇಕರ್ ಚಣ ಹೈ ಕಿ ಜಬ್ ತಕ್ ರಾತ್ ಬಾಕೀ ಹಾಯ್ (ರಾತ್ರಿ ಮುಗಿಯುವವರೆಗೂ ಪಂಜು ಹಿಡಿದುಕೊಂಡು ಹೋಗಬೇಕು) ಎಂದು ಹಾಡುತ್ತಾ ಹೊರಬಂದರು. ಹಳ್ಳಿ ಮಕ್ಕಳೂ ಅವರ  ಜೊತೆಯಲ್ಲಿ ಹಾಡುತ್ತಿದ್ದರು. ರಾಷ್ಟ್ರೀಯ ಕಾರ್ಯಾಧ್ಯಕ್ಷ ರಾಕೇಶ್ ಕೂಡ ತಮ್ಮ ಸ್ನೇಹಿತರೊಂದಿಗೆ ನಡೆದುಕೊಂಡು ಹೋಗುತ್ತಿದ್ದರು. ಸ್ಥಳೀಯರಾದ ವಿನಯ್ ಕುಮಾರ್, ಸುನೀಲ್ ಕುಮಾರ್ ದಾಸ್ ಸಹ ಗ್ರಾಮಸ್ಥರೊಂದಿಗೆ ತೆರಳುತ್ತಿದ್ದರು. ಸ್ವಲ್ಪ ದೂರದಲ್ಲಿ ನಿಲ್ಲಿಸಿ, ಜಾತಾದ ಸಹಚರರು ಗ್ರಾಮಸ್ಥರೊಂದಿಗೆ ಸಂವಾದವನ್ನು ನಡೆಸಿದರು. ಸ್ಥಳೀಯರ ಮಾತುಗಳನ್ನು ಕೇಳಿದರು ಮತ್ತು ಅವರಿಗೆ ತಮ್ಮದೇ ಆದ ಕಥೆಗಳನ್ನು ಹೇಳಿದರು. ಜಾತಾದ ಮಹತ್ವವನ್ನು ತಿಳಿಸುವುದು ಮಾತ್ರವಲ್ಲದೆ, ಕಾರ್ಯಕ್ರಮವು ಅವರ ಮೇಲೆ ಬೀರಿದ ಪ್ರಭಾವದ ಬಗ್ಗೆ ಅವರಿಂದ ಕೇಳಿದೆರು. ಊರು ದೊಡ್ಡದಾಗಿರುವುದರಿಂದ ಮನೆಗಳು ದೂರದಲ್ಲಿವು. ಜಾತಾ ಗದ್ದೆಗಳ ಹಾದಿ ಮತ್ತು ಮುಖ್ಯ ರಸ್ತೆಯ ಮೂಲಕ ಮುಂದೆ ಸಾಗಿತು.

ಜಾತಾ ಜಸೌಲಿ ಪಟ್ಟಿಯ ಮತ್ತೊಂದು ಪ್ರದೇಶವನ್ನು ತಲುಪಿತು, ಕಬ್ಬಿಣದ ಸೇತುವೆಯನ್ನು ದಾಟಿ ಜಸೌಲಿ ಪಟ್ಟಿಯ ಭಾಗವಾದ ಗ್ರಾಮವನ್ನು ತಲುಪಿತು. ಇಲ್ಲಿಂದ ಬಿಶುನ್‌ಪುರ ನಂಕಾರ್‌ನ ಜನರೊಂದಿಗೆ ಮಾತನಾಡಿದ ನಂತರ, ನಾವು ಇನ್ನೂ 03 ಕಿಲೋಮೀಟರ್ ನಡೆದು ಕೊತ್ವಾ ಬ್ಲಾಕ್‌ನ ಮಹಾತ್ಮ ಗಾಂಧಿ ನ್ಯಾಷನಲ್ ಮಿಡ್ಲ್ ಸ್ಕೂಲ್ ತಲುಪಿದೆವು. ಇಲ್ಲಿ ವಿದ್ಯಾರ್ಥಿಗಳ ಜೊತೆಗೆ ಶಿಕ್ಷಕರ ಜಾತಾ ಅವರ ಮುಖ್ಯೋಪಾಧ್ಯಾಯರ ಜೊತೆ ಜಾಥಾವನ್ನು ಸ್ವಾಗತಿಸಲು ನಿಂತಿದ್ದರು. ಶಾಲೆಯ ಒಳ ಆವರಣದಲ್ಲಿರುವ ಗಾಂಧೀಜಿಯವರ ಪ್ರತಿಮೆಗೆ ಎಲ್ಲರೂ ಮಾಲಾರ್ಪಣೆ ಮಾಡಿದರು. ಇಲ್ಲಿ ಪ್ರಾಂಶುಪಾಲ ಅಶೋಕ್ ಸಿಂಗ್, ಶಿಕ್ಷಕರಾದ ಜಿತೇಂದ್ರ ಕುಮಾರ್, ವಿಪಿನ್ ಬಿಹಾರಿ ಪ್ರಸಾದ್ ಮುಂತಾದವರು ತಮ್ಮ ಜಾತಾದ ಜೊತೆಗೂಡಿ ಗುಲ್ಮೊಹರ್ ಮತ್ತು ಅಮಲ್ತಾಸ್ ಸಸಿಗಳನ್ನು ನೆಟ್ಟು, ವಿದ್ಯಾರ್ಥಿಗಳೊಂದಿಗೆ ಸಂವಾದ ನಡೆಸುವಾಗ, ಜಾತಾದ ಉದ್ದೇಶದ ಬಗ್ಗೆ ಅವರಿಗೆ ತಿಳಿಸಲಾಯಿತು. ಶಾಲೆಯ ಬಳಿ ಸಂಗೀತ ಕಾರ್ಯಕ್ರಮ ನಡೆಯಿತು.

ಇಲ್ಲಿಂದ ಹೊರಟು ಸ್ಥಳೀಯ ನಿವಾಸಿ ಧ್ರುವ ನಾರಾಯಣ ಅವರ ಮನೆಯಲ್ಲಿ ಉಪಹಾರ ಸೇವಿಸಿದೆವು. ಅಲ್ಲಿಂದ ಲೋಮರಾಜ್ ಸಿಂಗ್ ಅವರ ಪ್ರತಿಮೆಗೆ ಮಾಲಾರ್ಪಣೆ ಮಾಡಿದ ನಂತರ ಅವರು ತಮ್ಮ ಕುಟುಂಬದ ಸದಸ್ಯ ರಘುನಾಥ್ ಸಿಂಗ್ ಅವರ ಮನೆಗೆ ತೆರಳಿ ಅವರಿಗೆ ಪ್ರೀತಿ ಮತ್ತು ಶ್ರಮದ ಸಂಕೇತವಾದ ಮಡಕೆ ಮತ್ತು ಚೀಲವನ್ನು ಉಡುಗೊರೆಯಾಗಿ ನೀಡಿದರು. ಸುಮಾರು 85 ವರ್ಷದ ರಘುನಾಥ್ ಸಿಂಗ್ ಭಾವುಕರಾದರು. ನೀವೆಲ್ಲ ಏನೇ ಮಾಡಿದರೂ ಇಲ್ಲಿನ ರೈತರು ಮಾಡಿದ ಹೋರಾಟಕ್ಕೆ ಗೌರವ ಕೊಡುತ್ತೇವೆ ಎಂದರು. ಈ ಗ್ರಾಮಕ್ಕೆ ನೀವು ನೀಡಿದ ಗೌರವಕ್ಕೆ ನಾವು ಕೃತಜ್ಞರಾಗಿರುತ್ತೇವೆ. ಅವರು ಮಾತನಾಡುತ್ತಿರುವಾಗ ಕಣ್ಣುಗಳು ಕಣ್ಣೀರಿನಿಂದ ತುಂಬಿದ್ದವು.

ಅಲ್ಲಿಂದ ಸಿರ್ಸಿಯಾ ಗ್ರಾಮವನ್ನು ತಲುಪಿದ ತಂಡ, ಮುಖ್ಯಸ್ಥ ಜಿತೇಂದ್ರ ಪ್ರಸಾದ್ ಯಾದವ್ ಅವರು ತಮ್ಮ ಗ್ರಾಮಸ್ಥರೊಂದಿಗೆ ಜಾಥಾವನ್ನು ಸ್ವಾಗತಿಸಿದರು. ತಂಡವು 12 ಗಂಟೆಗೆ ಆ ಗ್ರಾಮವನ್ನು ತಲುಪಿತು, 12:30 ಕ್ಕೆ ಸಾಂಸ್ಕೃತಿಕ ಕಾರ್ಯಕ್ರಮ ಪ್ರಾರಂಭವಾಯಿತು. ಅಲ್ಲಿನ ವೃತ್ತದಲ್ಲಿ ಭಾರೀ ಸಂಖ್ಯೆಯಲ್ಲಿ ಜನ ಜಮಾಯಿಸಿದ್ದರು. ಲಕ್ಷ್ಮೀ ಪ್ರಸಾದ್ ಯಾದವ್ ಅವರ ‘ಜವಾನ್ ತುಮ್ ಬಧೆ ಚಲೋ’ ಗೀತೆಯೊಂದಿಗೆ ಕಾರ್ಯಕ್ರಮ ಆರಂಭವಾಯಿತು. ಅದರ ನಂತರ, ರಾಜೇಂದ್ರ ಜಿ ಅವರು ಮೊದಲು ‘ಲೇಹ್ಲಿ ದೇಸ್ವಾ ಕೆ ಅಜಾದಿಯಾ ಬಾಪು ಖಾದಿಯಾ ಪಾಹಿನ್ ಕೆ ನಾ…’ ಅನ್ನು ಹಾಡಿದರು, ನಂತರ ‘ತೋಹರ್ ಹೀರಾ ಹೆರಾ ಗೈಲ್ ಕಾಪ್ಕೆ ಮೇ’ ಮತ್ತು ಕಬೀರರ ಹಾಡುಗಳನ್ನು ಪ್ರಸ್ತುತಪಡಿಸಿದರು, ಆ ಹಾಡುಗಳಿಗೆ ಬಹಳ ಮೆಚ್ಚುಗೆ ವ್ಯಕ್ತ ಪಡಿಸಲಾಯಿತು.

ಮೋತಿಹಾರಿ ಉಪನ್ಯಾಸಕ ಹರಿಶ್ಚಂದ್ರ ಚೌಧರಿ ಜನರನ್ನುದ್ದೇಶಿಸಿ ಮಾತನಾಡಿದರು. ಚೌಧರಿ ಅವರು ಚಂಪಾರಣ್ ಚಳವಳಿಯ ಕುರಿತು ಪ್ರಮುಖ ಪುಸ್ತಕಗಳನ್ನು ಬರೆದಿದ್ದಾರೆ ಎಂಬುದು ಗಮನಾರ್ಹ. ಊಟ ಮಾಡಿದ ನಂತರ ಎಲ್ಲರೂ ಕೊತ್ವಾ ಮಾರುಕಟ್ಟೆಯನ್ನು ತಲುಪಿದರು, ದಾರಿಯಲ್ಲಿ ಪರಸ್ಪರ ಭೇಟಿಯಾದರು. ನೆರೆದಿದ್ದ ಜನರೊಂದಿಗೆ ಸಂವಾದದಲ್ಲಿ ಹಾಡುಗಳು ಮತ್ತು ಸಂಗೀತವನ್ನು ಪ್ರಸ್ತುತಪಡಿಸಲಾಯಿತು. ಇದರಲ್ಲಿ ಗುಂಪಿನಲ್ಲಿದ್ದ ಹಿಮಾಂಶು ಕುಮಾರ್, ಸಂಜಯ್, ಶಿವಾನಿ ಗುಪ್ತಾ, ತನ್ನು ಕುಮಾರಿ, ಅಭಿಷೇಕ್ ಕುಮಾರ್, ಮಾಯಾ ಕುಮಾರಿ, ಪೂಜಾ ಕುಮಾರಿ, ಸುಬೋಧ್ ಕುಮಾರ್, ರಾಹುಲ್ ಕುಮಾರ್ ಮುಂತಾದವರು ಹಾಡುಗಳನ್ನು ಪ್ರಸ್ತುತಪಡಿಸಿದರು. ಅಲ್ಲಿಂದ ರಾತ್ರಿ 08 ಗಂಟೆಗೆ ಝಖ್ರಾ ಬಲುವಾ ಗ್ರಾಮವನ್ನು ತಲುಪಿದ ತಂಡ, ಸ್ಥಳೀಯ ಸ್ನೇಹಿತ ಜೋಗಿ ಮಾಂಝಿ ಅವರು ಇತರ ಗ್ರಾಮಸ್ಥರೊಂದಿಗೆ ಜಾಥಾವನ್ನು ಸ್ವಾಗತಿಸಿದರು. ಜೋಗಿ ಮಾಂಝಿ ಅವರನ್ನು ಕಬೀರ್ ಗಮ್ಛಾ ಅರ್ಪಿಸಿ ಗೌರವಿಸಲಾಯಿತು. 8:30ರಿಂದ ಗ್ರಾಮಸ್ಥರೊಂದಿಗೆ ಸಂವಾದದ ಜತೆಗೆ ಹಾಡು, ಸಂಗೀತ, ನಾಟಕ ಪ್ರಸ್ತುತಪಡಿಸಲಾಯಿತು. ಇದರಲ್ಲಿ ರಾಜೇಂದ್ರ ಪ್ರಸಾದ್ ರೈ, ಲಕ್ಷ್ಮೀ ಪ್ರಸಾದ್ ಯಾದವ್ ಮತ್ತು ಸ್ನೇಹಿತರು ಸೇರಿದ್ದರು. ಈ ಗ್ರಾಮವು ಕಾರ್ಮಿಕರ ಗ್ರಾಮವಾಗಿತ್ತು, ಆದರೆ ರಾತ್ರಿಯ ಕಾರ್ಯಕ್ರಮದಲ್ಲಿ ಅವರ ಉಪಸ್ಥಿತಿಯು ತುಂಬಾ ಉತ್ತೇಜನಕಾರಿಯಾಗಿತ್ತು. ಗ್ರಾಮದ ಮಹಿಳೆಯರು, ಮಕ್ಕಳು ಮತ್ತು ಯುವಕರು 03 ಗಂಟೆಗಳ ಕಾಲ ಕಾರ್ಯಕ್ರಮದೊಂದಿಗೆ ಸಂಪರ್ಕದಲ್ಲಿದ್ದು, ಜಾತಾದ ಬಗ್ಗೆ ಮಾಹಿತಿ ತೆಗೆದುಕೊಳ್ಳುತ್ತಾ, ಅವರು ಪ್ರೀತಿ ಮತ್ತು ಸಮಾನತೆಯ ಸಮಾಜದಲ್ಲಿ ತಮ್ಮ ನಂಬಿಕೆಯನ್ನು ವ್ಯಕ್ತಪಡಿಸಿದರು. ಈ ಗ್ರಾಮದಲ್ಲಿ ರಾತ್ರಿ ವಾಸ್ತವ್ಯ ನಡೆಯಿತು.


10 ಅಕ್ಟೋಬರ್ 2023 ಮಂಗಳವಾರ

ಜಖ್ರಾ ಬಲುವಾದಲ್ಲಿ ಜಖ್ರಾ ಪಟ್ಟಿಯಿದೆ, ಅಲ್ಲಿ ಜಾತಾ ಅಕ್ಟೋಬರ್ 9 ರ ರಾತ್ರಿ ತಂಗಿತು. ಬೆಳಗ್ಗೆ 9.30ಕ್ಕೆ ಜಖ್ರಾ ಬಳುವಾದಿಂದ ಗ್ರಾಮ ಪ್ರದಕ್ಷಿಣೆಗೆ ತೆರಳಿತು. “ಗಂಗಾ ಕಿ ಕಸಮ್ ಯಮುನಾ ಕಿ ಕಸಮ್” ನಂತಹ ಹಾಡುಗಳನ್ನು ಹಾಡುತ್ತಾ, ಜಾತಾ 10.15 ರ ಸುಮಾರಿಗೆ ಜಖ್ರಾ ವೃತ್ತದಲ್ಲಿ ನಿಲ್ಲಿಸಿ ಜನ ಸಂಪರ್ಕಿ ಮಾಡಲಾಯಿತು. ಬಳಿಕ ನ್ಯಾಷನಲ್ ಹೈಯರ್ ಮಿಡಲ್ ಸ್ಕೂಲ್ ಜಖ್ರಾ ಸರ್ವಶಿಕ್ಷಾ ಅಭಿಯಾನದ ಕಟ್ಟಡದಲ್ಲಿ ಮಕ್ಕಳನ್ನು ಭೇಟಿ ಮಾಡಲಾಯಿತು. ಅಲ್ಲಿ 500 ಮಕ್ಕಳು ಓದುತ್ತಾರೆ. ಸತೇಂದ್ರ ಕುಮಾರ್ ಶಿಕ್ಷಕ, ಚತುರ್ಭುಜ ಬೈಠಾ ಮುಖ್ಯೋಪಾಧ್ಯಾಯರು ಇಂದಿಗೂ ಸಾಕಷ್ಟು ಬಡತನವಿದೆ ಎಂದರು. ಅವರಿಗೆ ಜಮೀನು ಇಲ್ಲ, ಸ್ನಾನಗೃಹವೂ ಇಲ್ಲ ಇತ್ಯಾದಿ. ಜನರು ಇನ್ನೂ ಸಾಕಷ್ಟು ತೊಂದರೆ ಅನುಭವಿಸುತ್ತಿದ್ದಾರೆ ಎಂದು ಹೇಳಿದರು.

ಅಲ್ಲಿಂದ ಯಾತ್ರಿಗಳು ಸೂರ್ಯಾಪುರ ತಲುಪಿದರು. ಇದು ಕೂಡ ಒಂದು ಕುಗ್ರಾಮ. ಸಾಕಷ್ಟು ಬಡತನವಿದೆ. ಇಲ್ಲಿನ ಜನರೊಂದಿಗೆ ಮಾತನಾಡಿದ ಬಳಿಕ ಸೂರ್ಯಪುರ ಅಂಬೇಡ್ಕರ್ ತೋಳಕ್ಕೆ ತೆರಳಿ ಜನರನ್ನು ಭೇಟಿ ಮಾಡಿದರು. ಬೆಳಿಗ್ಗೆ 11.00 ಗಂಟೆಗೆ ಸರ್ಕಾರಿ ಮಧ್ಯಮ ಶಾಲೆ ಸೂರ್ಯಾಪುರ ಪಿಪ್ರಾ ಕೋಠಿ ಬ್ಲಾಕ್‌ಗೆ ತಲುಪಿ ಅಲ್ಲಿನ ಶಿಕ್ಷಕರು ಮತ್ತು ವಿದ್ಯಾರ್ಥಿಗಳೊಂದಿಗೆ ಮಾತನಾಡಿದರು. ಜಾತಾದ ಜೊತೆಯಲ್ಲಿದ್ದ ಸಹಚರರು ಅವರಿಗೆ ಕೆಲವು ಹಾಡುಗಳನ್ನು ಹಾಡಿದರು. ಜಾತಾದ ಉದ್ದೇಶವನ್ನು ಶಿಕ್ಷಕರು, ಪ್ರಾಂಶುಪಾಲರು ಮತ್ತು ವಿದ್ಯಾರ್ಥಿಗಳಿಗೆ ವಿವರಿಸಲಾಯಿತು. ಪ್ರಮೋದ್ ಸಿಂಗ್ ಈ ಶಾಲೆಯ ಮುಖ್ಯೋಪಾಧ್ಯಾಯರು. ಶಾಲೆಯಲ್ಲಿ 550 ವಿದ್ಯಾರ್ಥಿಗಳು ಓದುತ್ತಿದ್ದಾರೆ. ಶಿಕ್ಷಕರ ಸಂಖ್ಯೆ 13. ವಿನೋದ್ ರಾಮ್ ಸ್ಟೀಫನ್ ಒಬ್ಬ ಶಿಕ್ಷಕ. ಸಂಭಾಷಣೆಯ ಸಮಯದಲ್ಲಿ, ಸಮಾನತೆ ಮತ್ತು ಸಮಾನತೆಯ ಆಧಾರದ ಮೇಲೆ ಸಮಾಜವನ್ನು ರಚಿಸುವುದು ಜಾತಾದ ಉದ್ದೇಶವಾಗಿದೆ ಎಂದು ಅವರಿಗೆ ತಿಳಿಸಲಾಯಿತು. ಬಾಬಾಸಾಹೇಬ್ ಅಂಬೇಡ್ಕರ್, ಜೋತಿಬಾ ಫುಲೆ, ಗಾಂಧೀಜಿ, ಭಗತ್ ಸಿಂಗ್ ಮೊದಲಾದ ಮಹಾಪುರುಷರ ಚಿಂತನೆಗಳನ್ನು ಹೊತ್ತು ಹಳ್ಳಿ ಹಳ್ಳಿಗೆ ಹೋಗುತ್ತಿದ್ದೇವೆ. ಸಮಾಜ ಸುಧಾರಣೆಗೆ ಶಿಕ್ಷಣದ ಅಗತ್ಯವನ್ನು ಬಾಬಾ ಸಾಹೇಬರು ತೋರಿಸಿಕೊಟ್ಟಿದ್ದಾರೆ, ಅದನ್ನು ಮುಂದೆ ಕೊಂಡೊಯ್ಯಬೇಕಿದೆ. ಅಸಮಾನತೆಯ ಸಂಸ್ಕೃತಿ ತೊಲಗಬೇಕಿದೆ. ಸಮಾನತೆ ಆಧಾರಿತ ಸಂಸ್ಕೃತಿ ತರಬೇಕಿದೆ. ಶಿಕ್ಷಕ ವಿನೋದ್ ರಾಮ್ ಸ್ಟೀಫನ್ ಮಾತನಾಡಿ, ಈ ಕ್ಷೇತ್ರ ಅತ್ಯಂತ ಹಿಂದುಳಿದ ದಲಿತರಿಗೆ ಸೇರಿದ್ದು. ನಾನು ಮುಸಾಹರರ ಗುಂಪಿನಲ್ಲಿ ಓದುತ್ತಿದ್ದೆ, ಆ ಸಮಯದಲ್ಲಿ ನಾಮಮಾತ್ರದ ಶಿಕ್ಷಣವೂ ಇರಲಿಲ್ಲ. ಹೇಗೆ ಮಾತನಾಡಬೇಕೆಂದು ತಿಳಿಯಲಿಲ್ಲ. ಅಲ್ಲಿ ಎಲ್ಲರೂ ಸೇರಿ ಶಿಕ್ಷಣವನ್ನು ಹೆಚ್ಚಿಸಲು ಪ್ರಯತ್ನಿಸಿದರು. ಇಂದು ನಾವು ಸ್ವಲ್ಪ ಪ್ರಗತಿ ಸಾಧಿಸಿದ್ದೇವೆ.

ನಂತರ ಜಾತಾ ಜೀವಧಾರ ತಲುಪಿತು. ಈ ಮಾರ್ಗದಲ್ಲಿ ಕೆಲವೇ ಗ್ರಾಮಗಳಿವೆ. ಒಂದೇ ಗ್ರಾಮವು ಮೂರು-ನಾಲ್ಕು ಕಿಲೋಮೀಟರ್‌ಗಳಷ್ಟು ಹರಡಿದೆ. ಮಧ್ಯಾಹ್ನ ಜೀವಧಾರದ ಮುಖ್ಯರಸ್ತೆಯ ಸಂದಿಯಲ್ಲಿ ಬಳಗದ ಗೆಳೆಯರು ಕಾರ್ಯಕ್ರಮ ನಿರೂಪಿಸಿದರು. ‘‘ಧೈ ಆಖರ್ ಪ್ರೇಮ್ ಕೆ ಹಮ್ ಪಡನೆ ಔರ್ ಪಡಾನೆ’ ಹಾಡಿದರು  ಹಾಡಿನ ನಂತರ, ಮುಂದಿನ ಪ್ರಸ್ತುತಿ – ‘ಗಂಗಾ ಕಿ ಕಸಮ್, ಯಮುನಾ ಕಿ ಕಸಮ್, ಯೇ ತಾನಾ-ಬಾನಾ ಬದ್ಲೇಗಾ, ತೂ ಖುದ್ ಕೋ ಬದ್ಲೇಗಾ, ತಬ್ ತೋ ಯೇ ಜಮಾನ ಬದ್ಲೇಗಾ’.

ಈ ಯಾತ್ರೆಯಲ್ಲಿ ವಿವಿಧ ರಾಜ್ಯಗಳ ಜಿಲ್ಲೆಗಳು ಮತ್ತು ವಿವಿಧ ಸಂಘಟನೆಗಳ ಸ್ನೇಹಿತರು ಸಹ ಭಾಗವಹಿಸಿದ್ದಾರೆ. ಜಾರ್ಖಂಡ್ ಮುದ್ರಣಾಲಯದ ಉಪಾಧ್ಯಕ್ಷ ಪಂಕಜ್ ಶ್ರೀವಾಸ್ತವ ಅವರು ತಮ್ಮ ಅಭಿಪ್ರಾಯಗಳನ್ನು ಮಂಡಿಸುವಾಗ, ಗಾಂಧೀಜಿ ಚಂಪಾರಣ್‌ಗೆ ಆಗಮಿಸಿದ ಕಥೆಯನ್ನು ವ್ಯವಸ್ಥಿತವಾಗಿ ನೆರೆದಿದ್ದ ಜನರ ಮುಂದೆ ಪ್ರಸ್ತುತಪಡಿಸಿದರು. ಇಲ್ಲಿಯ ಕಾರ್ಯಕ್ರಮದಲ್ಲಿ ರಿತೇಶ್, ಹಿಮಾಂಶು ಹಾಗೂ ತಂಡದ ಇತರ ಸಂಗಡಿಗರು ಕೊನೆಯ ಗೀತೆ – ‘ತು ಜಿಂದ ಹೈ ಟು ಜಿಂದಗೀ ಕೀ ಜೀತ್ ಮೇಯ್ನ್ ಯಾಕೀನ್ ಕಾರ್, ಅಗರ್ ಕಹೀಂ ಹೈ ಸ್ವರ್ಗ ತು ಉತಾರ್ ಲ ಜಮೀನ್ ಪರ್”. ಹಾಡಿದರು. ಅಂತ್ಯದಲ್ಲಿ ರಿತೇಶ್ ಧನ್ಯವಾದ ಹೇಳಿದರು. ಅದರ ನಂತರ, ಜಾತಾದ ಜನರು ಜೀವಧಾರ ಮಲೈ ತೊಲದ ಮುಖ್ಯಸ್ಥ ಪಾಸ್ವಾನ್ ಜಿ ಅವರ ಮನೆಯಲ್ಲಿ ಊಟ ಮಾಡಿದರು.

ಸಾಂಸ್ಕೃತಿಕ ತಂಡ ಅಲ್ಲಿಂದ ಚಂದ್ರಹಿಯಾಕ್ಕೆ ಹೊರಟಿತು. ಅಲ್ಲಿಗೆ ತೆರಳಿದ ಜಾತಾದ ಸ್ನೇಹಿತರು ಗಾಂಧಿ ಸ್ಮಾರಕವನ್ನು ನೋಡಿ ಅಲ್ಲಿದ್ದ ಜನರೊಂದಿಗೆ ಸಂವಾದ ನಡೆಸಿದರು. ಬಳಿಕ ಅಲ್ಲಿಂದ ಸೇಲಂಪುರ ತಲುಪಿ ಅಲ್ಲಿ ಗ್ರಾಮಸ್ಥರನ್ನು ಭೇಟಿಯಾಗಿ ಜಾತಾದ ಉದ್ದೇಶದ ಬಗ್ಗೆ ತಿಳಿಸಿದರು. ದೇಶದ ಐಕ್ಯತೆ ಮತ್ತು ಸಮಗ್ರತೆ ಮತ್ತು ಪ್ರೀತಿ ವಿಶ್ವಾಸಕ್ಕೆ ಇಂತಹ ಜಾತಾ ಬಹಳ ಮುಖ್ಯ ಎಂದು ಸೇಲಂಪುರದ ಮುಖೇಶ್ ಜಿ ಹೇಳಿದರು. ನಾವು ಗ್ರಾಮಸ್ಥರು ನಿಮ್ಮ ಪ್ರಯಾಣವನ್ನು ಬೆಂಬಲಿಸುವುದು ಮಾತ್ರವಲ್ಲದೆ ನಿಮ್ಮ ಕೆಲಸವನ್ನು ಪ್ರಶಂಸಿಸುತ್ತೇವೆ. ಅಲ್ಲಿಂದ ರಾತ್ರಿ ವಿಶ್ರಾಂತಿಗಾಗಿ ಶಂಕರ್ ಸಾರಯ್ಯನ ದಿವ್ಯ ಜ್ಯೋತಿ ಪಬ್ಲಿಕ್ ಸ್ಕೂಲ್ ತೆರಳಿದೆವು. ಈ ಶಾಲೆಯಲ್ಲಿ ಯಾತ್ರೆಗೆ ಊಟ ಮತ್ತು ವಸತಿ ವ್ಯವಸ್ಥೆ ಇತ್ತು. ಹೆಚ್ಚಿನ ಸಂಖ್ಯೆಯಲ್ಲಿ ವಿದ್ಯಾರ್ಥಿಗಳು ಹಾಗೂ ಗ್ರಾಮಸ್ಥರು ಆಗಮಿಸಿದ್ದರು. ಸಾಂಸ್ಕೃತಿಕ ತಂಡ ಪ್ರಸ್ತುತಪಡಿಸಿದ ಕಾರ್ಯಕ್ರಮವು ಲಕ್ಷ್ಮೀ ಪ್ರಸಾದ್ ಯಾದವ್ ಅವರ ‘ಬಧೆ ಚಲೋ, ಜವಾನ್ ತುಮ್ ಬಧೆ ಚಲೋ’ ಹಾಡಿನೊಂದಿಗೆ ಪ್ರಾರಂಭವಾಯಿತು. ಆ ಬಳಿಕ ‘ಕೈಸೆ ಜೈಬೈಗೆ ಸಜ್ನಿಯ ಪಹಡ್ ತೊಡೆ ಲಾ’ ಪ್ರಸ್ತುತ ಪಡಿಸಿದರು. ಅಲ್ಲಿದ್ದ ಪ್ರೇಕ್ಷಕರು ಈ ಹಾಡುಗಳನ್ನು ತುಂಬಾ ಇಷ್ಟಪಟ್ಟರು ಇದಾದ ನಂತರ ರಾಜೇಂದ್ರ ಪ್ರಸಾದ್ ಅವರು ‘ಲಿಹ್ಲೇ ದೇಸ್ವಾ ಕೆ ಅಜ್ದಿಯಾ, ಖಾದಿಯಾ ಪಹಿಂ ಕೆ ಜಿ’ ಎಂದು ಹಾಡಿದರು. ಅವರ ಎರಡನೇ ಪ್ರಸ್ತುತಿ, ‘ಹಮಾರಾ ಹೀರಾ ಹೀರಾ ಗೇಲ್ ಕಚ್ರೇ ಮೇ’. ಈ ಹಾಡುಗಳು ಕೂಡ ಪ್ರೇಕ್ಷಕರ ಮೆಚ್ಚುಗೆಗೆ ಪಾತ್ರವಾಯಿತು.

ರಂಜಿತ್ ಗಿರಿ ಮತ್ತು ಶಾಲಾ ಮ್ಯಾನೇಜರ್ ರಾಂಪುಕರ್ ಜಿ ಬಳಗದ ಎಲ್ಲ ಸ್ನೇಹಿತರನ್ನು ಬಹಳ ಪ್ರೀತಿಯಿಂದ ಸ್ವಾಗತಿಸಿದರು. ರಂಜಿತ್ ಗಿರಿ ಸಮಾಜ ಸೇವಕ. ಅವರ ಉಪಸ್ಥಿತಿ ಮತ್ತು ಅವರ ಕೊಡುಗೆ ಗಮನಾರ್ಹವಾಗಿದೆ. ಸಾಂಸ್ಕøತಿಕ ಮೆರವಣಿಗೆಯ ಮಹತ್ವದ ಬಗ್ಗೆ ಬೆಳಕು ಚೆಲ್ಲುತ್ತಾ, ಇಂದು ಜಗತ್ತಿನಲ್ಲಿ ಹಿಂಸಾಚಾರ ಹೆಚ್ಚುತ್ತಿದ್ದು, ಈ ಪ್ರೀತಿಯ ಪ್ರಚಾರ ಮತ್ತು ಹಳ್ಳಿಯಿಂದ ಹಳ್ಳಿಗೆ ಹೋಗಿ ಜನರನ್ನು ಜಾಗೃತಗೊಳಿಸುವ ಮನೋಭಾವ ಮತ್ತು ಅವರಿಂದ ಕಲಿಯುವ ಬಯಕೆ ಬಹಳ ಮುಖ್ಯ ಎಂದು ಹೇಳಿದರು. ಇಂದು ಸಮಾಜದಲ್ಲಿ ಭಾತೃತ್ವಕ್ಕಾಗಿ ಇಂತಹ ಕೆಲಸಗಳ ಅಗತ್ಯ ಬಹಳ ಇದೆ.

ಹಿಮಾಂಶು ಕುಮಾರ್ ಮತ್ತು ಅವರ ಸ್ನೇಹಿತರು ಮತ್ತೊಮ್ಮೆ  ‘ಗಂಗಾ ಕಿ ಕಸಮ್, ಯಮುನಾ ಕಿ ಕಸಮ್, ಯೇ ತಾನಾ-ಬನಾ ಬದ್ಲೇಗಾ. ತು ಖುದ್ ಕೋ ಬಾದಲ್, ತಬ್ ತೋ ಏ ಜಮಾನ ಬದಲೆಗಾ ಹಾಡನ್ನು ಪ್ರಸ್ತುತಪಡಿಸಿದರು”. ಮುಂದಿನ ಪ್ರಸ್ತುತಿಯು ಛತ್ತೀಸ್‌ಗಢದ ಸಹೋದ್ಯೋಗಿ ನಿಸಾರ್ ಅಲಿ ಮತ್ತು ಸಹೋದ್ಯೋಗಿಗಳು ‘‘ಧೈ ಅಖರ್ ಪ್ರೇಮ್’ ನಾಟಕ ಪ್ರಸ್ತುತಪಡಿಸಿದರು. ನಿಸಾರ್ ಅಲಿ, ತಮ್ಮ ಸ್ನೇಹಿತರೊಂದಿಗೆ ಛತ್ತೀಸ್‌ಗಢದಿಂದ ಬಂದಿದ್ದರು ಮತ್ತು ಬಿಹಾರದ ಈ ಗುಂಪಿನೊಂದಿಗೆ ನಿರಂತರವಾಗಿ ಪ್ರವಾಸ ಮಾಡುತ್ತಿರುವರು.  ಅವರ ನಾಚ-ಗಮ್ಮತ್ ಶೈಲಿಯ ನಾಟಕ ಮಕ್ಕಳಿಗೆ ತುಂಬಾ ಇಷ್ಟವಾಯಿತು. ಈ ನಾಟಕದಲ್ಲಿ ಕಬೀರ್, ರಹೀಮ್, ಆದಮ್ ಗೊಂಡ್ವಿ ಅವರ ರಚನೆಗಳೂ ಸೇರಿದ್ದವು. ಅದಲ್ಲದೆ ಭಗತ್ ಸಿಂಗ್, ಮಹಾತ್ಮ ಗಾಂಧಿ, ಬಾಬಾಸಾಹೇಬ್ ಅಂಬೇಡ್ಕರ್ ಅವರ ಹೇಳಿಕೆಗಳನ್ನು ಉಲ್ಲೇಖಿಸಿ ಬಹಳ ಶೈಕ್ಷಣಿಕವಾಗಿ ಮಾಡಲಾಗಿತ್ತು. ಕಾರ್ಯಕ್ರಮದ ಕೊನೆಯಲ್ಲಿ ಹಿಮಾಂಶು ಮತ್ತು ಗೆಳೆಯರು ‘ತು  ಜಿಂದಾ ಹೈ ತೋ ಜಿಂದಗಿ ಕೀ ಜೀತ್ ಮೇ ಯಾಕೀನ್ ಕಾರ್, ಅಗರ್ ಕಹೀಂ ಹೈ ಸ್ವರ್ಗ ತೋ ಉತಾರ್ ಲ ಜಮೀನ್ ಪರ್’’ ಕವಿತೆ ಪ್ರಸ್ತುತಪಡಿಸಿದರು. ರಿತೇಶ್ ವಂದಿಸಿದರು.


11 ಅಕ್ಟೋಬರ್ 2023 ಬುಧವಾರ

ಶಂಕರ್ ಸಾರಯ್ಯನಲ್ಲಿ ರಾತ್ರಿ ವಿಶ್ರಾಂತಿಯ ನಂತರ, ಜಾತಾ ದಿವ್ಯ ಜ್ಯೋತಿ ಪಬ್ಲಿಕ್ ಶಾಲೆಯಿಂದ ಬೆಳಿಗ್ಗೆ 06 ಗಂಟೆಗೆ ಮುಂದಿನ ಪ್ರಯಾಣಕ್ಕೆ ಹೊರಟಿತು. ಸಂಗಡಿಗರು ಹಾಡುತ್ತಾ ಪ್ರಯಾಣ ಆರಂಭಿಸಿದರು. ಹರ್ದಿಯಾನ್ ಗ್ರಾಮದ ರಂಜಿತ್ ಗಿರಿ ಮತ್ತು ಗಿರೀಂದರ್ ಮೋಹನ್ ಠಾಕೂರ್ ಗುಂಪಿನೊಂದಿಗೆ ಮುಂದೆ ಹೋಗುತ್ತಿದ್ದರು. ಜಾತಾ 7:30 ರ ಸುಮಾರಿಗೆ ಟಿಕೈಟಿ ಗ್ರಾಮವನ್ನು ತಲುಪಿತು. ಗೋಪಾಲ್ ವೃತ್ತಮಾಧೋಪುರ್ ತಲುಪಿದ ನಂತರ, ಜಾತಾದ ಸಹಚರರು ಸ್ಥಳೀಯ ಜನರನ್ನು ಭೇಟಿಯಾದರು. ಎಲ್ಲರಿಗೂ ಪ್ರೀತಿಯನ್ನು ಪಸರಿಸಲು ಈ ಯಾತ್ರೆನೊಂದಿಗೆ ಗ್ರಾಮದಿಂದ ಗ್ರಾಮಕ್ಕೆ ಸುತ್ತಾಡುತ್ತಿದ್ದೇವೆ ಎಂದು ರಿತೇಶ್ ಹೇಳಿದರು. ದ್ವೇಷ ಮತ್ತು ದ್ವೇಷದಿಂದ ಕೂಡಿದ ಸಮಾಜದಲ್ಲಿ ಪ್ರೀತಿ ಮತ್ತು ಸಮಾನತೆಯನ್ನು ಹೇಗೆ ಸ್ಥಾಪಿಸಬಹುದು ಎಂಬುದನ್ನು ಹೇಳುವುದು ಈ ಜಾತಾದ ಉದ್ದೇಶವಾಗಿದೆ.

ಬಳಿಕ ಗೆಳೆಯ ನಿಸಾರ್ ಅಲಿ ತಂಡದ ಬಗ್ಗೆ ಮಾಹಿತಿ ನೀಡಿ, “ರಾಹ್ವ್ನ್ ಪರ್ ನೀಲಾಂ ಹಮಾರೀ ಭೂಖ್ ನಹಿಂ ಹೊ ಪಾಈಗೀ, ಅಪನೀ ಕೊಶಿಶ್ ಹೈ ಕಿ ಐಸೀ ಸುಬಹ್ ಯಹಾಂ ಪರ್ ಆಯೆಗೀ”  ಹಾಡು ಹಾಡಿದರು. ಹಾಡು ಕೇಳಿ ಗೋಪಾಲ್ ವೃತ್ತದಲ್ಲಿ ಜನಸಾಗರವೇ ನೆರೆದಿತ್ತು.  “ಕಭೀ ನ ನ ಪನ ಎಕ್ ತೂಟೆ ಬಟಮಾರೋ ಕೀ ಕಹಾನೀ ಮೇ” ಜನರು ಅಂತಹ ಸಾಲುಗಳಲ್ಲಿ ನೃತ್ಯ ಮಾಡಿದರು. ರಂಜಿತ್ ಗಿರಿ ಅವರು ತಮ್ಮ ಹೇಳಿಕೆಯಲ್ಲಿ, ‘ದೇಶದಲ್ಲಿ ಹಳ್ಳಿ ಹಳ್ಳಿಗೆ ಅಲೆದಾಡುವ ಉದ್ದೇಶ  ಒಂದು  ಕನಸಿನೊಂದಿಗೆ ಸ್ನೇಹಿತರೆಲ್ಲರೂ ಸೇರಿಕೊಂಡು ನಡೆಸುತ್ತಿರುವ ಈ ತಂಡ ನಾವೆಲ್ಲರೂ ಹಳ್ಳಿಯಿಂದ ಹಳ್ಳಿಗೆ ಅಲೆದಾಡಿ ನಿಮ್ಮೊಂದಿಗೆ ನಾವು  ಇದ್ದೇವೆ. ಜನರು ಒಂದಾದರೆ  ಅವರ ಶಕ್ತಿಯಾಗುತ್ತಾರೆ. ನಾವು ಪ್ರೀತಿಯಿಂದ ಬದುಕುತ್ತೇವೆ, ವಿದ್ಯಾವಂತರಾಗುತ್ತೇವೆ, ಸಂಘಟಿತರಾಗುತ್ತೇವೆ ಮತ್ತು ಸಮಾನತೆಯ ಆಧಾರದ ಮೇಲೆ ಹೊಸ ಪ್ರಪಂಚಕ್ಕಾಗಿ ಹೋರಾಡುತ್ತೇವೆ.

‘ಗಂಗಾ ಕಿ ಕಸಮ್, ಯಮುನಾ ಕಿ ಕಸಮ್, ಯೇ ತಾನಾ ಬನಾ ಬದ್ಲೇಗಾ, ತೂ ಖುದ್ ಕೋ ಬದ್ಲೇಗಾ, ತಬ್ ತೋ ಯೇ ಜಮಾನಾ ಬದ್ಲೇಗಾ.’, ಈ ಹಾಡನ್ನು ಹೊರತುಪಡಿಸಿ ಹಿಮಾಂಶು ಮತ್ತು ಅವರ ಸ್ನೇಹಿತರು ಮತ್ತೊಂದು ಹಾಡನ್ನು ಪ್ರಸ್ತುತಪಡಿಸಿದರು – ‘‘ಧೈ ಅಖರ್ ಪ್ರೇಮ್ ಕೆ ಪಡನೆ ಔರ್ ಪಡಾನೇ ಆಏ ಹೈ, ಹಮ್ ಭಾರತ್ ಸೆ ನಾಫರಾತ್ ಕ ಹರ್ ದಾಗ್ ಮಿತಾನೆ ಆಏ ಹೈ.’ ಹಾಡುಗಳ ಪ್ರಸ್ತುತಿಯ ನಂತರ ಅಲ್ಲಿದ್ದ ಗ್ರಾಮಸ್ಥರು ಆರ್ಥಿಕ ನೆರವು ನೀಡಿದರು. ವಿಜಯ್ ಶಾ, ಉವಾಸ್ ರಾಮ್ ರಂಜಿತ್ ಗಿರಿ, ಗಿರೀಂದರ್ ಠಾಕೂರ್ ಗುಂಪಿನೊಂದಿಗೆ ನಿರಂತರವಾಗಿ ನಡೆಯುತ್ತಿದ್ದರು. ಈ ಜನರ ಸಹಕಾರ ಶ್ಲಾಘನೀಯ.

7.30ಕ್ಕೆ ಗೋಪಾಲ್ ವೃತ್ತದಲ್ಲಿ ಅಂಗಡಿಗಳು ತೆರೆದಿದ್ದವು. ಈ ಪ್ರದೇಶವು ಸಂಪೂರ್ಣವಾಗಿ ರೈತರು ಮತ್ತು ಕಾರ್ಮಿಕರಿಗೆ ಸೇರಿದೆ. ಇಂತಹ ಕಾರ್ಯಕ್ರಮಗಳ ಮೂಲಕ ನಾವು ಒಟ್ಟಾಗಿ ಬಾಳುವ ಶಕ್ತಿ ಪಡೆಯುತ್ತೇವೆ ಎಂದು ನೆರೆದಿದ್ದವರು ಹೇಳಿದರು. ಉವಾಸ್ ರಾಮ್ ಅಂತಿಮವಾಗಿ ತಮ್ಮ ಅಭಿಪ್ರಾಯಗಳನ್ನು ಮಂಡಿಸಿದರು ಮತ್ತು ಜಾಥಾವನ್ನು ಅಭಿನಂದಿಸಿದರು. ಗೋಪಾಲ್ ವೃತ್ತನಲ್ಲಿ ಸುಮಾರು ಒಂದು ಗಂಟೆ ಕಾಲ ಕಾರ್ಯಕ್ರಮ ನಡೆಸಿ ಜನರೊಂದಿಗೆ ವಿಚಾರ ವಿನಿಮಯ ಮಾಡಿಕೊಂಡ ನಂತರ ಜಾತಾ ಮುಂದೆ ಸಾಗಿತು. 8:30 ರ ಸುಮಾರಿಗೆ ಜಾತಾ ಮಾಧೋಪುರ ಮಧುಮಲತ್ ತಲುಪಿತು. ಅಲ್ಲಿದ್ದ ದಿನೇಶ್ ಮಿಶ್ರಾ ಮತ್ತು ಸತ್ಬೀರ್ ಅಹಮದ್ ಸಾಹೇಬ್, ಈ ಜಾತಾ ಸಹೋದರತ್ವವನ್ನು ತರಲಿದೆ. ನಾವೆಲ್ಲರೂ ಗ್ರಾಮಸ್ಥರು ಈ ಜಾಥಾವನ್ನು ಸ್ವಾಗತಿಸುತ್ತೇವೆ. ಗ್ರಾಮದ ಸಮಸ್ಯೆಗಳನ್ನು ವಿವರಿಸಿದ ಅವರು, ಇಲ್ಲಿ ಉದ್ಯೋಗ ಎಂಬುದೇ ಇಲ್ಲ. ಸುತ್ತಲೂ ನಿರುದ್ಯೋಗವಿದೆ. ಹೇಗೋ ಬದುಕುತ್ತಿದ್ದೇವೆ. ಇದು ತುಂಬಾ ಕೆಟ್ಟ ಪರಿಸ್ಥಿತಿ. ನಿರುದ್ಯೋಗಿ ಯುವಕರು ಹೇಗೋ ಇಲ್ಲೇ ಬದುಕಿ ಜೀವನ ಸಾಗಿಸುತ್ತಾರೆ. ಅವರು ಕೃಷಿ ಮತ್ತು ಸ್ಥಳೀಯ ಸಣ್ಣ ಅಂಗಡಿಗಳಲ್ಲಿ ಕೆಲಸ ಮಾಡುವ ಮೂಲಕ ತಮ್ಮ ಜೀವನವನ್ನು ನಡೆಸುತ್ತಿದ್ದರೆ. ಇಲ್ಲಿಯ ಸೊಗಸು ಎಂದರೆ ಇಲ್ಲಿ ಜಾತಿ, ಧರ್ಮದ ದ್ವೇಷವಿಲ್ಲ. ಜನರೆಲ್ಲ ಒಬ್ಬೊಬ್ಬರ ಹಬ್ಬಗಳಿಗೆ ಬಂದು ಹೋಗುತ್ತಾರೆ, ಭೇಟಿಯಾಗುತ್ತಾರೆ. ದೇಶದ ಸದ್ಯದ ಪರಿಸ್ಥಿತಿಯಲ್ಲಿ ತಾರತಮ್ಯ ಸೃಷ್ಟಿಯಾಗುತ್ತಿರುವ ರೀತಿ ಹೊಸ ಭರವಸೆ ಮೂಡಿಸಿದೆ.

ಇಲ್ಲಿಂದ ಆರಂಭಗೊಂಡ ಯಾತ್ರೆ ವಿಜಯ್ ಕುಮಾರ್ ಉಪಾಧ್ಯಾಯ ಅವರ ಕೋಚಿಂಗ್ ಸೆಂಟರ್ ಬಳಿ ನಿಂತಿದ್ದು, ಹಲವು ವಿದ್ಯಾರ್ಥಿಗಳು ಭಾಗವಹಿಸಿದ್ದರು. ಅಲ್ಲಿ ಹಿಮಾಂಶು, ಶಿವಾನಿ, ವಿಜಯ್ ಮತ್ತು ಇತರ ಸ್ನೇಹಿತರು ಹಾಡನ್ನು ಪ್ರಸ್ತುತಪಡಿಸಿದರು, ‘ಗಂಗಾ ಕಿ ಕಸಮ್, ಯಮುನಾ ಕಿ ಕಸಮ್, ಯೇ ತಾನಾ ಬನಾ ಬದ್ಲೇಗಾ, ತೂ ಖುದ್ ಕೋ ಬದ್ಲೇಗಾ, ತಬ್ ತೋ ಯೇ ಜಮಾನಾ ಬದ್ಲೇಗಾ. ಹಿಮಾಂಶು, ಶಿವಾನಿ, ಅಮನ್, ಸಂಜಯ್, ಪೂಜಾ ಎರಡನೇ ಹಾಡನ್ನು ಪ್ರಸ್ತುತಪಡಿಸಿದರು, ‘‘ಧೈ ಅಖರ್ ಪ್ರೇಮ್ ಕೆ ಪಡನೆ ಔರ್ ಪಡಾನೇ ಆಏ ಹೈ, ಹಮ್ ಭಾರತ್ ಸೆ ನಾಫರಾತ್ ಕ ಹರ್ ದಾಗ್ ಮಿತಾನೆ ಆಏ ಹೈ ; “ ದಿಲ್ ಸೆ ದಿಲ್ ಕ ನಾಟ ಜೋಡೋ. ಭಾರತ್ ಜೋಡೋ, ಭಾರತ್ ಜೋಡೋ”  ವಿಜಯ್ ಕುಮಾರ್ ಉಪಾಧ್ಯಾಯರು ತಮ್ಮ ವಿದ್ಯಾರ್ಥಿಗಳು ಮತ್ತು ನೆರೆದಿದ್ದ ಜನರು ಘೋಷಣೆಗಳನ್ನು ಕೂಗುವಂತೆ ಮಾಡಿದರು – ಎಲ್ಲರೂ “ ನಫರತ್  ಛ್ಹೋಡೊ , ದಿಲ್ ಸೆ ದಿಲ್ ಕ ನಾತಾ  ಜೋಡೋ.” ಎಂಬ ಘೋಷಣೆ ಕೂಗುತ್ತಿದ್ದರು

ಇಲ್ಲಿ ಹತ್ತಕ್ಕೂ ಹೆಚ್ಚು ಮಸೀದಿಗಳು ಮತ್ತು ಅನೇಕ ದೇವಾಲಯಗಳಿವೆ. ಎಲ್ಲರೂ ಒಟ್ಟಿಗೆ ವಾಸಿಸುತ್ತಾರೆ. ಅವರು ಪರಸ್ಪರ ಸುಖ ಮತ್ತು ದುಃಖದಲ್ಲಿ ತೊಡಗಿಸಿಕೊಂಡಿದ್ದಾರೆ. ಈ ದೇವಾಲಯಗಳು ಮತ್ತು ಮಸೀದಿಗಳು ನಮ್ಮ ಏಕತೆಯ ಸಂಕೇತವಾಗಿದೆ. ಜನರು ತಮ್ಮದೇ ಆದ ನಂಬಿಕೆಗಳೊಂದಿಗೆ ಬದುಕುವ ಹಕ್ಕು ಹೊಂದಿದ್ದಾರೆ. ಈ ಗ್ರಾಮ ನಮ್ಮದು. ಈ ದೇವಾಲಯಗಳು ಮತ್ತು ಮಸೀದಿಗಳು ನಮ್ಮದು. ಅವರನ್ನು ಶುದ್ಧವಾಗಿ ಇಟ್ಟುಕೊಳ್ಳುವುದು ಮತ್ತು ಒಟ್ಟಿಗೆ ಪ್ರೀತಿಸುವುದು ನಮ್ಮ ಜೀವನದ ಸೂತ್ರವಾಗಿದೆ. ಆ ನಂತರ ತಂಡದ ಕಲಾವಿದ ಗೆಳೆಯರು ಮತ್ತೊಂದು ಹಾಡನ್ನು ಪ್ರಸ್ತುತಪಡಿಸಿದರು – ‘ತೂ ಜಿಂದಾ ಹೈ, ತೂ ಜಿಂದಗಿ ಕಿ ಜೀತ್ ಪರ್ ಯಮನ್ ಕರ್, ಅಗರ್ ಕಹೀಂ ಹೈ ಸ್ವರ್ಗ್ ತೋ ಉತರ್ ಲಾ ಜಮೀನ್ ಪರ್’. ಮಾಯಾ ‘ನಾವು ಮಗಳು, ಶಾಪವಲ್ಲ’ ​​ಎಂಬ ಕವನ ವಾಚಿಸಿದರು. ಕೊನೆಯಲ್ಲಿ, ರಿತೇಶ್ ನಮ್ಮೊಂದಿಗೆ ಬನ್ನಿ, ಹಾಡುಗಳನ್ನು ಹಾಡಲು ಮತ್ತು ಕವಿತೆಗಳನ್ನು ಹೇಳಲು ಗ್ರಾಮಸ್ಥರನ್ನು ಒತ್ತಾಯಿಸಿದರು. ಈ ಪ್ರವಾಸವನ್ನು ನಾವು ತುಂಬಾ ಆನಂದಿಸುತ್ತಿದ್ದೇವೆ ಎಂದು ಪ್ರಸ್ತುತ ವಿದ್ಯಾರ್ಥಿಗಳು ಹೇಳಿದರು. ಇದೆಲ್ಲ ನಡೆಯುತ್ತಿರುವುದು ನಮಗಾಗಿ, ನಮ್ಮ ದೇಶಕ್ಕಾಗಿ. ಇದು ಸ್ವಾಗತಾರ್ಹವಾದುದು.

ಜಾತಾ ಸರ್ಕಾರಿ ಮಧ್ಯಮ ಶಾಲೆ ಮಾಧೋಪುರ ಮಠದ (ತುರ್ಕೌಲಿಯಾ) ಮುಂದಿನ ನಿಲ್ದಾಣವನ್ನು ತಲುಪಿತು. ಶಾಲೆಯ ಅಂಗಳದಲ್ಲಿ ಮುಖ್ಯೋಪಾಧ್ಯಾಯರು ಹಾಗೂ ಶಿಕ್ಷಕರು ತಂಡದ ಸದಸ್ಯರನ್ನು ಸ್ವಾಗತಿಸಿದರು. ಶಾಲೆಯಲ್ಲಿ ಸುಮಾರು ಆರುನೂರು ವಿದ್ಯಾರ್ಥಿಗಳಿದ್ದರು. ಸಾಕಷ್ಟು ಉತ್ಸಾಹ ಕಾಣಿಸುತ್ತಿತ್ತು. ಹಿಮಾಂಶು ತಮ್ಮ ಸ್ನೇಹಿತರೊಂದಿಗೆ ಹಾಡನ್ನು ಪ್ರಸ್ತುತಪಡಿಸಿದರು. ತುರ್ಕೌಲಿಯಾದಿಂದ ಆಹಾರ ಸೇವಿಸಿದ ನಂತರ ಜಾತಾ ಮುಂದೆ ಸಾಗಿತು.  ಸುಮಾರು 45 ನಿಮಿಷಗಳ ಕಾಲ ನಡೆದ ನಂತರ ಮೆರವಣಿಗೆ ಬೈರಿಯಾ ಬಜಾರ್ ತಲುಪಿತು. ಅಲ್ಲಿಗೆ ತಲುಪಿದ ನಂತರ ಕರಪತ್ರಗಳನ್ನು ಹಂಚಲಾಯಿತು. ಈ ಜಾತಾದ ಉದ್ದೇಶದ ಬಗ್ಗೆ ಜನರನ್ನು ಸಂಪರ್ಕಿಸಲಾಯಿತು ಮತ್ತು ಮಾತನಾಡಿದರು.

ಅದರ ನಂತರ ಜಾತಾ ಪಿಪರಿಹಾವನ್ನು ತಲುಪಿತು. ಹಾಡುಗಳು ಮತ್ತು ಸಂಗೀತದ ಮೂಲಕ ಜನರಿಗೆ ಅವರ ಪ್ರಯಾಣದ ಬಗ್ಗೆ ಮಾಹಿತಿ ನೀಡಲಾಯಿತು. ಈ ಪ್ರದೇಶದಲ್ಲಿ ಕಂಡುಬರುವ ವಿಷಯವೆಂದರೆ ಬಡತನ ಮತ್ತು ನಿರುದ್ಯೋಗ. ಅವರು ಸಣ್ಣ ಜಮೀನು ಹೊಂದಿರುವ ರೈತರು. ಉದ್ಯೋಗದ ಕೊರತೆಯಿಂದ ಹೆಚ್ಚಿನ ಯುವಕರು ಹೊರರಾಜ್ಯಗಳಿಗೆ ಕೆಲಸಕ್ಕೆ ಹೋಗುತ್ತಾರೆ. ಶೌಚಾಲಯಗಳಿಲ್ಲ. ಚಿಕ್ಕ ಗುಡಿಸಲುಗಳಿವೆ. ಸರ್ಕಾರದ ಸೌಲಭ್ಯಗಳು ಎಲ್ಲರಿಗೂ ಸಿಗುತ್ತಿಲ್ಲ. ಗಾಂಧೀಜಿ, ಭಗತ್ ಸಿಂಗ್ ಮತ್ತು ಬಾಬಾಸಾಹೇಬರ ಬಗ್ಗೆ ಹೆಚ್ಚಿನ ಜನರಿಗೆ ತಿಳಿದಿರುವುದು ಈ ಪ್ರದೇಶದ ಗಮನಾರ್ಹ ಸಂಗತಿಯಾಗಿದೆ. ಪೂರ್ವ ಚಂಪಾರಣ್‌ನ ವೀರೇಂದ್ರ ಮೋಹನ್ ಠಾಕೂರ್ ಮೊದಲ ದಿನದಿಂದಲೂ ಗುಂಪಿನೊಂದಿಗೆ ಇದ್ದರು.   ಅವರು ನಡೆಯುವುದು ಮಾತ್ರವಲ್ಲ, ವಿವಿಧ ಮೈಲಿಗಲ್ಲುಗಳನ್ನು ತಲುಪಲು ಸಹ ಸಹಾಯ ಮಾಡುತ್ತಾರೆ. ಪಿಪರಿಹಾದ ಮೂಲಕ ರಾತ್ರಿ ವಿಶ್ರಾಂತಿಗಾಗಿ ಸಂಜೆ 6.30 ರ ಸುಮಾರಿಗೆ ಸಪಾಹಿ ತಲುಪಿದ ಗುಂಪು, ಪಂಚಾಯತ್ ಭವನದಲ್ಲಿ ತಂಡಕ್ಕೆ ತಂಗಲು ವ್ಯವಸ್ಥೆ ಮಾಡಲಾಗಿತ್ತು.

6:30ಕ್ಕೆ ನಡೆದ ಸಾಂಸ್ಕೃತಿಕ ಕಾರ್ಯಕ್ರಮದಲ್ಲಿ ನಿಸಾರ್ ಅಲಿ ಮತ್ತು ದೇವನಾರಾಯಣ ಸಾಹು ಅವರು ಛತ್ತೀಸ್‌ಗಢದ ನಾಚ-ಗಮ್ಮತ್ ಶೈಲಿಯ ‘‘ಧೈ ಅಖರ್ ಪ್ರೇಮ್’ ನಾಟಕವನ್ನು ಪ್ರಸ್ತುತಪಡಿಸಿದರು. ಈ ಶೈಲಿಯು ಛತ್ತೀಸ್‌ಗಢದ ಜಾನಪದ ರಂಗಭೂಮಿ ಶೈಲಿಯಾಗಿರುವುದರಿಂದ, ಅದರ ಹೊಸತನವು ಪ್ರೇಕ್ಷಕರನ್ನು ಸಾಕಷ್ಟು ರಂಜಿಸಿತು. ಈ ನಾಟಕವು ಪ್ರಯಾಣದ ಉದ್ದಕ್ಕೂ ಬಹಳ ಜನಪ್ರಿಯವಾಗುತ್ತಿದೆ. ತಂಡವು ಹಾದುಹೋಗುವಲ್ಲೆಲ್ಲಾ ಛತ್ತೀಸ್‌ಗಢದ ಇಬ್ಬರು ಕಲಾವಿದರು ಅದನ್ನು ಪ್ರದರ್ಶಿಸುತ್ತಾರೆ. ಇದರೊಂದಿಗೆ ಸಹೋದ್ಯೋಗಿ ನಿಸಾರ್ ಅಲಿ ಅವರು ಕಬೀರ್, ರಹೀಮ್, ಆದಮ್ ಗೊಂಡ್ವಿ ಮುಂತಾದವರ ದ್ವಿಪದ್ಯಗಳು, ಗಜಲ್‌ಗಳನ್ನು ಸಹ ಓದುತ್ತಾರೆ ಮತ್ತು ನಾಟಕದ ಮೂಲ ಸಂದೇಶವನ್ನು ಸಾರ್ವಜನಿಕರಿಗೆ ತಲುಪಿಸುತ್ತಾರೆ.

ಜಾತಾದ ಸಂದೇಶದ ಬಗ್ಗೆ ರಿತೇಶ್ ಗ್ರಾಮಸ್ಥರಿಗೆ ವಿವರವಾಗಿ ತಿಳಿಸಿದರು. ಇದರ ನಂತರ ಮತ್ತೆ ಹಾಡುಗಳನ್ನು ಪ್ರಸ್ತುತಪಡಿಸಲಾಯಿತು. ಗೆಳೆಯರಾದ ಹಿಮಾಂಶು, ಶಿವಾನಿ, ತನ್ನು, ಮಾಯಾ, ಪೂಜಾ ಮೊದಲಾದವರು ತಮ್ಮ ಹಾಡುಗಳಿಂದ ಜನರನ್ನು ಮಂತ್ರಮುಗ್ಧಗೊಳಿಸಿದರು. ಮೊದಲ ಹಾಡು, ‘ಗಂಗಾ ಕಿ ಕಸಮ್, ಯಮುನಾ ಕಿ ಕಸಮ್, ಯೇ ತಾನಾ ಬನಾ ಬದ್ಲೇಗಾ, ತೂ ಖುದ್ ಕೋ ಬದ್ಲೇಗಾ, ತಬ್ ತೋ ಯೇ ಜಮಾನಾ ಬದ್ಲೇಗಾ.’ ಎರಡನೇ ಪ್ರಸ್ತುತಿ, ‘‘ಧೈ ಅಖರ್ ಪ್ರೇಮ್ ಕೆ ಪಡನೆ ಔರ್ ಪಡಾನೇ ಆಏ ಹೈ, ಹಮ್ ಭಾರತ್ ಸೆ ನಾಫರಾತ್ ಕ ಹರ್ ದಾಗ್ ಮಿತಾನೆ ಆಏ ಹೈ“ ಆಗಿತ್ತು.

ಈ ಮೂಲಕ ಸಿಪಹಾ ಬಜಾರ್ ನಲ್ಲಿ ಜನರೊಂದಿಗೆ ಸಂವಾದ ಕಾರ್ಯಕ್ರಮ ಮುಕ್ತಾಯವಾಯಿತು. ಕಾರ್ಯಕ್ರಮ ಮುಗಿದು ಬಹಳ ಹೊತ್ತು ವಿದ್ಯುತ್ ವ್ಯತ್ಯಯ ಉಂಟಾದರೂ ಗ್ರಾಮಸ್ಥರು ಅಡುಗೆ ಮಾಡಿ ಎಲ್ಲ ವ್ಯವಸ್ಥೆ ಮಾಡಿಕೊಂಡಿದ್ದರು ಜಾತಾದ ಸದಸ್ಯರ ಹಾಡುಗಳ ಅಭ್ಯಾಸ ಮತ್ತು ವರದಿಗಳನ್ನು ಬರೆಯುವ ಕೆಲಸವು ಅನೇಕ ಟಾರ್ಚ್‌ಗಳ ಸಹಾಯದಿಂದ ಮುಂದುವರೆಯಿತು.


12 ಅಕ್ಟೋಬರ್ 2023 ಗುರುವಾರ

ಬೆಳಿಗ್ಗೆ ಜಾತಾ ಸಪಾಹಿ ಗ್ರಾಮದಿಂದ ಮುಂದೆ ಸಾಗಿತು. ಈ ಜಾಥಾವು ಪರಸ್ಪರ ಪ್ರೀತಿ, ಶಾಂತಿ ಮತ್ತು ಸೌಹಾರ್ದತೆಯ ಆಚರಣೆಯಾಗಿದೆ, ಇದು ಜಗತ್ತಿನಲ್ಲಿ ಪ್ರಚಲಿತದಲ್ಲಿರುವ ದ್ವೇಷ ಮತ್ತು ಅಪನಂಬಿಕೆಯ ಭಾವನೆಗೆ ಪ್ರತಿಕ್ರಿಯೆಯಾಗಿ ಸಾಂಸ್ಕೃತಿಕ ಕಾರ್ಯಕರ್ತರು ಮತ್ತು ಜವಾಬ್ದಾರಿಯುತ ನಾಗರಿಕರ ಪ್ರಮುಖ ಉಪಕ್ರಮವಾಗಿದೆ. ಹಳ್ಳಿಯ ಕೆಲವು ವಿದ್ಯಾವಂತ ನಿರುದ್ಯೋಗಿ ಯುವಕರನ್ನು ಮಾತನಾಡಿಸಿದಾಗ ಅವರು ತಮ್ಮ ಅಭಿಪ್ರಾಯಗಳನ್ನು ವ್ಯಕ್ತಪಡಿಸಿದರು, ‘ಕೆಲವು ಬಲಿಷ್ಠ ಮತ್ತು ಶಕ್ತಿಯುತ ದೇಶಗಳು ದುರ್ಬಲ ದೇಶಗಳನ್ನು ನಾಶಮಾಡಲು ಬಯಸುತ್ತವೆ.   ಸುತ್ತಲೂ ಯುದ್ಧದ ಭೀಕರತೆಯಿಂದ ಜಗತ್ತು ತತ್ತರಿಸಿದೆ.  ಇಸ್ರೇಲ್ ಗಾಜಾ ಪಟ್ಟಿಯ ಮೇಲೆ ದಾಳಿ ಮಾಡುವ ಮೂಲಕ ಪ್ಯಾಲೆಸ್ತೀನ್ ಜನರನ್ನು ನಾಶಮಾಡಲು ಪ್ರಯತ್ನಿಸುತ್ತಿರುವ ರೀತಿ ಸಂಪೂರ್ಣವಾಗಿ ಅಸಹ್ಯಕರವಾಗಿದೆ. ಇದು ಆತಂಕಕಾರಿಯಾಗಿದೆ. ನಿಮ್ಮ ಜಾತಾದ ಉದ್ದೇಶಗಳೊಂದಿಗೆ ನಾವು ನಿಲ್ಲುತ್ತೇವೆ. ನಾವೆಲ್ಲರೂ ಯುದ್ಧ ಮತ್ತು ಹಿಂಸೆಯ ಜಗತ್ತನ್ನು ಬಯಸುವುದಿಲ್ಲ. ನಾವು ಚಿಕ್ಕವರು ಆದರೆ ನಮ್ಮ ಕನಸುಗಳು ನಜ್ಜುಗುಜ್ಜಾಗುತ್ತಿದೆ. ಉದ್ಯೋಗ ಎನ್ನುವುದು ಉದ್ಯೋಗವಲ್ಲ. ಓದು, ಬರವಣಿಗೆ ಇದ್ದರೂ ಹೇಗೋ ಸಣ್ಣ ಪುಟ್ಟ ಕೆಲಸಗಳನ್ನು ಮಾಡುತ್ತಾ ಸುಮ್ಮನೆ ಉಸಿರಾಡುವಂತಾಗಿದೆ.

ಪಾದಯಾತ್ರೆಯ ಸಂದರ್ಭದಲ್ಲಿ ಗ್ರಾಮಸ್ಥರು ಸ್ಥಳೀಯ ಕಥೆಗಳನ್ನು ಐತಿಹಾಸಿಕ ಸಂದರ್ಭದೊಂದಿಗೆ ನಿರೂಪಿಸಿದರು. ಜಾತಾ ಸಪಾಹಿಯಿಂದ ಹೊರಡುವ ಮೊದಲು, ನಿವಾಸಿ ಶಂಭು ಸಾಹ್ನಿ ಅವರು ಸಪಾಹಿ ಬಜಾರ್‌ನಲ್ಲಿ ರಾತ್ರಿಯಲ್ಲಿ ಸಂಗೀತ ಕಾರ್ಯಕ್ರಮವನ್ನು ಪ್ರದರ್ಶಿಸಿದರು, ಅಲ್ಲಿ ಒಂದು ಬಾವಿ ಇದೆ, ಅದರ ನೀರು ವಿಷಕಾರಿಯಾಗಿದೆ. ಬ್ರಿಟಿಷರು ನೀರು ಕೇಳಿದಾಗ ಹಳ್ಳಿಗರು ಅದೇ ಬಾವಿಯಿಂದ ನೀರು ಕೊಡುತ್ತಿದ್ದರು ಎಂದು ಪೂರ್ವಜರು ಹೇಳುತ್ತಾರೆ. ಆ ನೀರು ಕುಡಿದು ಬದುಕುವ ಸಾಧ್ಯತೆಯೇ ಇರಲಿಲ್ಲ. ಹೀಗೆ ನಮ್ಮ ಪೂರ್ವಜರು ಎಲ್ಲ ರೀತಿಯಲ್ಲೂ ತಮ್ಮ ಪ್ರತಿಭಟನೆಯನ್ನು ವ್ಯಕ್ತಪಡಿಸುತ್ತಿದ್ದರು. ಎದುರಿನಿಂದ ಹೋರಾಡುವ ಮೂಲಕ, ಹಾಗೆಯೇ ಅವಕಾಶ ಸಿಕ್ಕಾಗಲೆಲ್ಲಾ. ಆ ಬಾವಿ ಇಂದಿಗೂ ಇದೆ. ಶಂಭು ಸಾಹ್ನಿ ಅವರು ಈ ಬಾವಿಯನ್ನು ‘ತಿತಾಹ್ವಾ ಇನಾರ್’ ಎನ್ನುತ್ತಾರೆ. ‘ಮತ್ ಮುವಾ ಮತ್ ಮಹೂರ್ ಖಾ, ಮಾರೇ ಕೆ ಹೋಖೇ ತೊ ಸಪಾಹಿ ಜಾ’ ಎಂದು ಹಾಡಿನ ಮೂಲಕ ಹೇಳಿದರು. ನಮ್ಮ ಪೂರ್ವಜರು ಈ ಕಥೆಯನ್ನು ಹೇಳುತ್ತಿದ್ದರು. ಈ ನಂಬಿಕೆ ಈ ಪ್ರದೇಶದಲ್ಲಿ ಇಂದಿಗೂ ಇದೆ. ಇಂದಿಗೂ ಸಪಾಹಿ ಅಭಿವೃದ್ಧಿಗಾಗಿ ಕಾಯುತ್ತಿದೆ. ಸರ್ಕಾರದ ಲೂಟಿಯೇ ಜಾಸ್ತಿ. ಬಡವರ ಸಂಖ್ಯೆ ತುಂಬಾ ಹೆಚ್ಚಾಗಿದೆ. ಹಲವಾರು ಧಾರ್ಮಿಕ ಆಚರಣೆಗಳಿವೆ. ಶಿಕ್ಷಣದ ಗುಣಮಟ್ಟ ತೀರಾ ಕಳಪೆಯಾಗಿದೆ. ತೋರಿಸಲು ಅಭಿವೃದ್ಧಿ ಇದೆ ಆದರೆ ಅದು ಕೆಲವೇ ಜನರಿಗೆ ಮಾತ್ರ ಸೀಮಿತವಾಗಿದೆ. ಇಲ್ಲಿಯೂ ಬ್ರಿಟಿಷರು ಇಂಡಿಗೋವನ್ನು ಬೆಳೆಸುತ್ತಿದ್ದರು ಮತ್ತು ರೈತರನ್ನು ಶೋಷಣೆ ಮತ್ತು ದಬ್ಬಾಳಿಕೆಗೆ ಒಳಪಡಿಸಿದರು.

ಅಕ್ಟೋಬರ್ 12 ರಂದು ಜಾತಾದ ಮೊದಲ ನಿಲ್ದಾಣವು ಸಫಿ ವೆರೆಟಿಯಾ (ವಾರ್ಡ್ ನಂ. 5) ಆಗಿತ್ತು. ಜಾತಾದ ಉದ್ದೇಶವನ್ನು ಅಲ್ಲಿನ ವೃತ್ತದಲ್ಲಿ ಗ್ರಾಮಸ್ಥರೊಂದಿಗೆ ಚರ್ಚಿಸಲಾಯಿತು. ಜಾತಾದ ಎಲ್ಲಾ ಸದಸ್ಯರು ಒಟ್ಟಾಗಿ ಹಿಮಾಂಶು ಅವರ ನೇತೃತ್ವದಲ್ಲಿ ಹಾಡನ್ನು ಹಾಡಿದರು. ‘’‘ಧೈ ಅಖರ್ ಪ್ರೇಮ್ ಕೆ ಪಡನೆ ಔರ್ ಪಡಾನೇ ಆಏ ಹೈ, ಹಮ್ ಭಾರತ್ ಸೆ ನಾಫರಾತ್ ಕ ಹರ್ ದಾಗ್ ಮಿತಾನೆ ಆಏ ಹೈ.” ಅದರ ನಂತರ ಮತ್ತೊಂದು ಹಾಡು, ‘ಗಂಗಾ ಕಿ ಕಸಮ್, ಯಮುನಾ ಕಿ ಕಸಮ್, ಯೇ ತಾನಾ ಬನಾ ಬದ್ಲೇಗಾ, ತೂ ಖುದ್ ಕೋ ಬದ್ಲೇಗಾ, ತಬ್ ತೋ ಯೇ ಜಮಾನಾ ಬದ್ಲೇಗಾ.’ ಹಾಡಿದರು ಜಾತಾ ಬನಾರಸಿ ವೃತ್ತ(ಚೈಲಾಹನ್) ನಲ್ಲಿ ನಿಲ್ಲಿಸಿತು. ಅಲ್ಲಿ ಊಟ ಮಾಡಿದ ನಂತರ ಜಾತಾ ಮುಂದೆ ಸಾಗಿತು. ಅರವಿಂದ್ ಕುಮಾರ್ ಸಿಂಗ್ (ಅಜ್ಗರಿ) ಮತ್ತು ಕುಮಾರ್ ಮನೋಜ್ ಸಿಂಗ್ (ಪಚ್ರುಖಾ) ಪಶ್ಚಿಮ (ಮುಖ್ಲಿಸ್‌ಪುರ್) ತುಕಡಿಯನ್ನು ಮುನ್ನಡೆಸುತ್ತಿದ್ದರು. ಅರವಿಂದ್ ಜಿ ಅವರು ಮಾಜಿ ಮುಖ್ಯಸ್ಥರಾಗಿದ್ದರು. ಅವರು ತಂಡವನ್ನು ಬಹಳ ಗೌರವದಿಂದ ಸ್ವಾಗತಿಸಿದರು ಮತ್ತು ಅವರನ್ನು ಎಲ್ಲಾ ರೀತಿಯಲ್ಲಿ ಪರಿಚಯಿಸುವ ಮೂಲಕ ಪಾದಯಾತ್ರೆಯನ್ನು ಆಹ್ಲಾದಕರವಾಗಿರಿಸಿದರು.

ಇಲ್ಲಿಂದ ಜಾತಾ ಹೊರಟು ಬದಕ್ ಮಿಯಾ ಸಮಾಧಿಯನ್ನು ತಲುಪಿತು. ಮಸೀದಿಯ ಪಕ್ಕದಲ್ಲಿ ಗೋರಿ ಇದೆ. (ಗಾಂಧೀಜಿ ಮೋತಿಹಾರಿಗೆ ಬಂದಾಗ ಬ್ರಿಟಿಷರು ಹಾಲಿಗೆ ವಿಷ ಹಾಕಿ ಗಾಂಧೀಜಿಯನ್ನು ಕೊಲ್ಲುವ ಸಂಚು ಹೂಡಿದ್ದರು ಎಂದು ಬದಕ್ ಮಿಯಾ ಗೆ ತಿಳಿಯಿತು. ಬದಕ್ ಮಿಯಾ ಇದನ್ನು ತಿಳಿದ ನಂತರ ಅವರು ಮೊದಲು ತೀವ್ರವಾಗಿ ಅಳುತ್ತಿದ್ದರು, ಆದರೆ ನಂತರ ಅವರು ಹೋಗಿ ಗಾಂಧೀಜಿಗೆ ಹೇಳಿದರು. ಇದನ್ನು ಕೇಳಿ ಗಾಂಧೀಜಿಗೆ ಹಾಲು ಕುಡಿಸಲು ನಿರಾಕರಿಸಿ ಗಾಂಧೀಜಿ ಉಪವಾಸವಿರುವುದರಾಗಿ ಹೇಳಿದರು ಆದ್ದರಿಂದ ಗಾಂಧೀಜಿಯ ಪ್ರಾಣ. ಗಾಂಧೀಜಿ ಬದುಕದೇ ಇದ್ದಿದ್ದರೆ ಸ್ವಾತಂತ್ರ್ಯ ಸಿಗುತ್ತಿರಲಿಲ್ಲ ಎಂಬ ನಂಬಿಕೆ ಇಂದಿಗೂ ಆ ಪ್ರದೇಶದಲ್ಲಿ ಬಲವಾಗಿದೆ. ಈ ಘಟನೆಯ ವಿವರಗಳನ್ನು ಜನರು ವಿವರಿಸಿದ್ದಾರೆ. ಜಾತಾದ ಸಹಚರರು ಈ ವಿಷಯಗಳನ್ನು ಅನೇಕ ಸ್ಥಳಗಳಲ್ಲಿ ದಾಖಲಿಸಿದ್ದಾರೆ.)

ಅಲ್ಲಿ ಮೊಹಮ್ಮದ್. ಹಾಜಿ ಹುಸೇನ್ ಅನ್ಸಾರಿ ಸಾಹಿಬ್ ಖಾಜಿ ಮತ್ತು ಮೌಲಾನಾ ಸಲಾವುದ್ದೀನ್ ರಿಜ್ವಿ ಇಮಾಮ್ ಸಾಹಿಬ್ ಅವರನ್ನು ಭೇಟಿಯಾದರು. ಬದಕ್ ಮಿಯಾನ ಚಿಹ್ನೆಗಳನ್ನು ಅಳಿಸಲು ಎಲ್ಲಾ ಪ್ರಯತ್ನಗಳನ್ನು ಮಾಡಲಾಗುತ್ತಿದೆ ಎಂದು ಅವರು ಹೇಳಿದರು. ಬದಕ್ ಮಿಯಾ ಅವರ ಮೊಮ್ಮಗ ಹೈದರ್ ಅನ್ಸಾರಿ ಇನ್ನೂ ಗ್ರಾಮದಲ್ಲಿ ವಾಸಿಸುತ್ತಿದ್ದಾರೆ. ಅವರಿಗೆ ಜಮೀನು ಕೂಡ ಇಲ್ಲ. ಅವರ ಮಗ ಸಬೀರ್ ಅಲಿ ಅಂಗವಿಕಲ. ನವಾಝನ್ ಖಾತೂನ್ ಅವರ ಪತ್ನಿ. ಈ ಕುಟುಂಬ ಡಕ್ ಮಿಯಾನ್ ಅವರ ಸಹೋದರನಿಗೆ ಸೇರಿದೆ. ಅವನಿಗೆ ಈಗ ಕುಟುಂಬವಿಲ್ಲ. ಇಂದಿಗೂ ಅಜಗಡಿ ಗ್ರಾಮದ ಜನರು ಗಾಂಧೀಜಿ ಹಾಗೂ ಬದಕ ಮಿಯಾ ಅನ್ಸಾರಿಯವರ ನೆನಪುಗಳನ್ನು ಅದೇ ರೀತಿ ಉಳಿಸಿಕೊಂಡಿದ್ದಾರೆ. ಇಡೀ ಇತಿಹಾಸವನ್ನು ಜಾನಪದ ನೆನಪುಗಳಲ್ಲಿ ಮಾತ್ರ ಸಂರಕ್ಷಿಸಲಾಗಿದೆ. ಇಂದಿಗೂ ಕೆಲವು ಹಿರಿಯರು ನಮ್ಮ ನಾಯಕ ಗಾಂಧೀಜಿಯೇ ಎಂದು ಹೇಳುತ್ತಿರುವುದು ಕಂಡು ಬಂತು. ಗಾಂಧೀಜಿ ಮತ್ತು ಬಖ್ಮಿಯನ್ ಅವರ ಕನಸುಗಳ ಭಾರತವನ್ನು ನಿರ್ಮಿಸುವಲ್ಲಿ ಕೆಲವರು ಯಾವಾಗಲೂ ಅಡೆತಡೆಗಳನ್ನು ಸೃಷ್ಟಿಸುತ್ತಿದ್ದಾರೆ.

ನಂತರ ಜಾತಾ ಸಿಸ್ವಾ ತಲುಪಿತು. ದಾರಿಯಲ್ಲಿ ಮಾರುಕಟ್ಟೆಯನ್ನು ಕಂಡುಕೊಂಡರು ಮತ್ತು ಜಾತಾ ಅಲ್ಲಿ ಜನರನ್ನು ಸಂಪರ್ಕಿಸುತ್ತಾ ಮುಂದೆ ಸಾಗಿತು. ರಾತ್ರಿ ಇಳಿಯುತ್ತಿತ್ತು. ಜನರು ನಿಧಾನವಾಗಿ ಹಾಡಿದರು ಮತ್ತು ರಾತ್ರಿ ವಿಶ್ರಾಂತಿಯ ಸ್ಥಳವಾದ ಸಿಸ್ವಾವನ್ನು ತಲುಪಿದರು. ಇಲ್ಲಿನ ಪಂಚಾಯಿತಿ ಕಟ್ಟಡದಲ್ಲಿ ತಂಗಲು ವ್ಯವಸ್ಥೆ ಮಾಡಲಾಗಿತ್ತು. ಸಿಸ್ವಾದಲ್ಲಿ, ಮಾಜಿ ಶಾಸಕ ರಾಮಾಶ್ರಯ್ ಪ್ರಸಾದ್ ಸಿಂಗ್, ಅಮೀರುಲ್ ಹುದಾ, ಮಂಜರಿಯಾ ಬ್ಲಾಕ್‌ನ ಮುಖ್ಯಸ್ಥ ಜಾಫೀರ್ ಆಜಾದ್ ಚಮನ್ ಮುಂತಾದವರು ತಮ್ಮ ಇತರ ಸಹೋದ್ಯೋಗಿಗಳೊಂದಿಗೆ ಇಡೀ ಜಾಥಾವನ್ನು ಸ್ವಾಗತಿಸಿದರು. ಸ್ವಲ್ಪ ಹೊತ್ತು ನಿಲ್ಲಿಸಿ ಸಾಮಾನು ಇತ್ಯಾದಿಗಳನ್ನು ಇಟ್ಟುಕೊಂಡು ಜಾತಾ 7.30 ರ ಸುಮಾರಿಗೆ ಕಫಾರಿಯಾ ತೋಲಾ ಸಿಸ್ವಾ ವೃತ್ತತಲುಪಿತು. ಆಗಲೇ ಇಲ್ಲಿ ಜನ ಜಮಾಯಿಸಿದ್ದರು. ಜಾತಾದ ಆಗಮನದ ಬಗ್ಗೆ ಅವನಿಗೆ ಮೊದಲೇ ತಿಳಿದಿತ್ತು. ತುಂಬಾ ಉತ್ತೇಜನಕಾರಿ ವಾತಾವರಣವಿತ್ತು. ಇದು ಮುಸ್ಲಿಂ ಪ್ರಾಬಲ್ಯವಿರುವ ಪ್ರದೇಶವೂ ಹೌದು. ಇಲ್ಲಿಯೂ ಪರಸ್ಪರ ಏಕತೆ ಕಾಣುತ್ತಿತ್ತು.

ಜೋಗಿರಾ ಇಂದ ಕಾರ್ಯಕ್ರಮ ಆರಂಭವಾಯಿತು. ಪಿಯೂಷ್ ಶುರು ಮಾಡಿದ ಕೂಡಲೇ ಇಡೀ ತಂಡ ಅವರ ಜೊತೆ ‘ಓ ಜೋಗಿರಾ ಸರರ್… ರ್ರ್ರ್… ರ್ರ್ರ್. ಜನರು ‘ಆರ್’ನಲ್ಲಿ ನೃತ್ಯ ಮಾಡುತ್ತಿದ್ದರು. ನಂತರ ರಿತೇಶ್ ಜನರಲ್ಲಿ ತಮ್ಮ ಅಭಿಪ್ರಾಯಗಳನ್ನು ವ್ಯಕ್ತಪಡಿಸಿದರು ಮತ್ತು ಜಾಥಾದ ಮಹತ್ವದ ಬಗ್ಗೆ ಜನರೊಂದಿಗೆ ಮಾತನಾಡಿದರು. ಬಳಿಕ ಇಪ್ಟಾ ರಾಷ್ಟ್ರೀಯ ಕಾರ್ಯದರ್ಶಿ ಶೈಲೇಂದ್ರ ಜನರನ್ನುದ್ದೇಶಿಸಿ ಮಾತನಾಡಿದರು. ಗಾಂಧೀಜಿ ಮತ್ತು ಭಗತ್ ಸಿಂಗ್ ಅವರ ಪರಂಪರೆಯನ್ನು ಉಳಿಸುವ ಸಮಯ ಇದಾಗಿದೆ ಮತ್ತು ಇಂದು ನಾವು ನಿಂತು ಮಾತನಾಡುತ್ತಿರುವ ಈ ಇಡೀ ಪ್ರದೇಶವು ಗಾಂಧೀಜಿ ಮತ್ತು ರೈತರು ಮತ್ತು ಕಾರ್ಮಿಕರ ಒಗ್ಗಟ್ಟಿನ ಸಂಗಮವಾಗಿದೆ. ಇದು ಗಾಂಧೀಜಿ ಮತ್ತು ಅವರ ಅನೇಕ ಸಹಚರರ ಕೆಲಸದ ಸ್ಥಳವಾಗಿದೆ. ಇಂದು ಆ ನೆಲವನ್ನು, ನಮ್ಮ ದೇಶವನ್ನು ದ್ವೇಷದ ಅಖಾಡವನ್ನಾಗಿ ಮಾಡಲಾಗುತ್ತಿದೆ. ಈ ಹಿಂದೆ, ನಾನು ಚಿಕ್ಕವನಿದ್ದಾಗ, ನಾನು ಭಜನೆ ಕೇಳುತ್ತಿದ್ದೆ, ‘ಮನ್ ತದ್ಪತ್ ಹರಿ ದರ್ಶನ್ ಕೋ ಆಜ್’, ಅದನ್ನು ಮೊಹಮ್ಮದ್ ರಫಿ ಹಾಡಿದ್ದಾರೆ, ಶಕೀಲ್ ಬಡಾಯುನಿ ಬರೆದಿದ್ದಾರೆ ಮತ್ತು ಸಂಯೋಜಕ ನೌಶಾದ್. ಅವರು ಎಲ್ಲಾ ದೂರವನ್ನು ಸೇತುವೆ ಮಾಡಿದರು. ಈ ದೇಶವು ತಯಾರಿಕೆಯಲ್ಲಿದೆ. ಸೂಫಿ-ಸಂತರು, ಗಾಲಿಬ್, ಮೀರ್, ನಿರಾಲಾ, ಕಾಳಿದಾಸ್ ಅವರ ಸುದೀರ್ಘ ಸಂಪ್ರದಾಯವಾದ ಅಮೀರ್ ಖುಸ್ರೋ ಮೂಲಕ ಹಾದುಹೋಗುವ ಮೂಲಕ ಈ ದೇಶ ರೂಪುಗೊಂಡಿದೆ. ಸ್ವಾತಂತ್ರ್ಯ ಚಳವಳಿಯಲ್ಲಿ ಭಗತ್ ಸಿಂಗ್ ಮತ್ತು ಗಾಂಧೀಜಿ ನಡುವೆ ಕೆಲವು ಸೈದ್ಧಾಂತಿಕ ವ್ಯತ್ಯಾಸಗಳಿದ್ದವು, ಅವರ ವಿಧಾನಗಳು ಸ್ವಲ್ಪ ವಿಭಿನ್ನವಾಗಿವೆ; ಆದರೆ ಇಬ್ಬರೂ ಒಟ್ಟಾಗಿ ದೇಶದ ಸ್ವಾತಂತ್ರ್ಯಕ್ಕಾಗಿ ಹೋರಾಡುತ್ತಿದ್ದರು. ಕೇವಲ ಸ್ವಾತಂತ್ರ್ಯವಲ್ಲ, ಸಮಾನತೆಯೊಂದಿಗೆ ಸ್ವಾತಂತ್ರ್ಯ, ಕಾರ್ಮಿಕರು ಮತ್ತು ರೈತರಿಗೆ ಸ್ವಾತಂತ್ರ್ಯ, ಊಳಿಗಮಾನ್ಯತೆಯ ಕಪಿಮುಷ್ಠಿಯಿಂದ ಮಹಿಳೆಯರಿಗೆ ಸ್ವಾತಂತ್ರ್ಯ! ಇಬ್ಬರೂ ದೇಶವನ್ನು ಜಾತ್ಯತೀತ ರಾಷ್ಟ್ರವಾಗಿ ನೋಡಲು ಬಯಸಿದ್ದರು. ನಾವು ಅವರ ನಿಜವಾದ ವಾರಸುದಾರರು. ಆ ಹೋರಾಟಗಳು ಮತ್ತು ಕನಸುಗಳನ್ನು ರಕ್ಷಿಸಲು ನಾವು ನಿಮ್ಮೊಂದಿಗೆ ಸೇರಲು ಇಲ್ಲಿದ್ದೇವೆ. ಗಾಂಧೀಜಿಗೆ ನೈತಿಕ ಶಕ್ತಿ ಇತ್ತು. ಪ್ರೀತಿಯ ಸಂದೇಶದೊಂದಿಗೆ ನಾವು ನಿಮ್ಮ ಮುಂದೆ ಬಂದಿದ್ದೇವೆ.

ಮತ್ತೊಮ್ಮೆ ಲಕ್ಷ್ಮಿ ಪ್ರಸಾದ್ ಯಾದವ್ ಹಾಡನ್ನು ಪ್ರಾರಂಭಿಸಿದರು – ‘ಸೋನೆವಾಲೆ ಜಾಗ್ ಸಮಯ ಅಂಗದಾತಾ ಹೈ’. ಬಳಿಕ ‘ಬಧೇ ಚಲೋ ಜವಾನ್, ತುಮ್ ಬಧೆ ಚಲೋ, ಬಧೇ ಚಲೋ’ ಎಂಬ ಇನ್ನೊಂದು ಗೀತೆಯನ್ನು ಹಾಡಿದರು. ಮಾಜಿ ಶಾಸಕ ರಾಮಾಶ್ರಯ ಪ್ರಸಾದ್ ಸಿಂಗ್ ಅಭಿಪ್ರಾಯ ಮಂಡಿಸಿ, ‘ನನಗೆ ಅದೃಷ್ಟದ ಸಂಗತಿ, ಹೊಸ ಸಸಿಗಳನ್ನು ಕಾಣುತ್ತಿದ್ದೇವೆ. ಅವರನ್ನು ನೋಡಿ ಭವಿಷ್ಯ ಇನ್ನೂ ಸುರಕ್ಷಿತ ಎಂಬ ಆತ್ಮವಿಶ್ವಾಸ ಹೆಚ್ಚಿದೆ. ಮಕ್ಕಳು ಒಂದೇ ಧ್ವನಿಯಲ್ಲಿ ಒಟ್ಟಿಗೆ ಬಾಳುವ ಪ್ರತಿಜ್ಞೆ ತೆಗೆದುಕೊಳ್ಳುವವರೆಗೆ ನಮ್ಮನ್ನು ಸೋಲಿಸಲು ಯಾರಿಂದಲೂ ಸಾಧ್ಯವಿಲ್ಲ’ ಎಂದು ಹೇಳಿದರು. ಇದಾದ ನಂತರ ಲಕ್ಷ್ಮಿ ಪ್ರಸಾದ್ ಯಾದವ್ ಅವರು ಮತ್ತೆ ಹಾಡನ್ನು ಹಾಡಿದರು, ‘ಕೈಸೆ ಜೈಬೇ ಗಯೇ ಸಜ್ನಿಯಾ ಪಹಡ್ ತೊಡೆ ಲಾ ಹೇ, ಹಮರ್ ಅಂಗುರಿ ಸೇ ಖುನ್ವಾ ಕೆ. ಹರಿವು.  ಕಾಮ್ರೇಡ್ ರಿತೇಶ್ ಅವರು ನೆರೆದಿದ್ದ ಜನರನ್ನು ಜಾತಾ ಸೇರುವಂತೆ ಮನವಿ ಮಾಡಿದರು. ಆ ನಂತರ ಪ್ರಮುಖ್ ಚಮನ್ ಜಿ ಹೇಳಿದರು, ಪ್ರೀತಿಯ ಉದ್ದೇಶ ನಿಮಗೆಲ್ಲರಿಗೂ ತಿಳಿದಿದೆ. ಎಷ್ಟೇ ಅಭಿವೃದ್ಧಿ ಮಾಡಿದರೂ ಪ್ರೀತಿ ವಿಶ್ವಾಸವಿಲ್ಲದಿದ್ದರೆ ಅಂತಹ ಅಭಿವೃದ್ಧಿಗೆ ಅರ್ಥವಿಲ್ಲ. ಇದು ಗಾಂಧೀಜಿಯವರ ಕಾರ್ಯಕ್ಷೇತ್ರವಾಗಿದೆ ಮತ್ತು ಅವರು ನಮಗೆ ಪ್ರೀತಿ ಮತ್ತು ತ್ಯಾಗದ ಪಾಠಗಳನ್ನು ಕಲಿಸಿದರು. ನಮ್ಮ ಬಹುಸಂಸ್ಕೃತಿಯ ಐಡೆಂಟಿಟಿಯಲ್ಲಿ ನಾವು ಸುಂದರವಾಗಿ ಕಾಣುತ್ತೇವೆ.

ನಿಸಾರ್ ಅಲಿ ಮತ್ತು ದೇವನಾರಾಯಣ ಸಾಹು ಅವರು ಛತ್ತೀಸ್‌ಗಢದ ಜಾನಪದ ರಂಗಭೂಮಿ ನಾಚಾ-ಗಮ್ಮತ್ ಶೈಲಿಯಲ್ಲಿ ‘‘ಧೈ ಅಖರ್ ಪ್ರೇಮ್’ ನಾಟಕವನ್ನು ಪ್ರಸ್ತುತಪಡಿಸಿದರು. ಪ್ರೇಕ್ಷಕರ ಉತ್ಸಾಹ ಮುಗಿಲು ಮುಟ್ಟಿತ್ತು. ಸ್ಥಳೀಯ ಜನರಿಗೆ ನೃತ್ಯವು ಸಂಪೂರ್ಣವಾಗಿ ಹೊಸದು, ಆದರೂ ಜನರು ಅದನ್ನು ತುಂಬಾ ಆನಂದಿಸಿದರು. ಮಕ್ಕಳು ಜಿಗಿಯುತ್ತಿದ್ದರು, ತುಂಬಾ ಉತ್ಸಾಹವಿತ್ತು. ನಾಟಕದ ನಡುವೆ ಕಬೀರನ ದ್ವಿಪದಿಗಳು, ರಹೀಮ್‌ನ ದ್ವಿಪದಿಗಳು ಮತ್ತು ಆದಂ ಗೊಂಡ್ವಿಯವರ ಗಜಲ್‌ಗಳನ್ನು ಪ್ರಸ್ತುತಪಡಿಸಲಾಯಿತು. ನಂತರ ಹಿಮಾಂಶು ಮತ್ತು ಅವರ ಸ್ನೇಹಿತರು ಹಾಡನ್ನು ಪ್ರಸ್ತುತಪಡಿಸಿದರು, ‘‘ಧೈ ಅಖರ್ ಪ್ರೇಮ್ ಕೆ ಪಡನೆ ಔರ್ ಪಡಾನೇ ಆಏ ಹೈ, ಹಮ್ ಭಾರತ್ ಸೆ ನಾಫರಾತ್ ಕ ಹರ್ ದಾಗ್ ಮಿತಾನೆ ಆಏ ಹೈ. ಇದು ಬಿಹಾರ ರಾಜ್ಯದ ‘‘ಧೈ ಅಖರ್ ಪ್ರೇಮ್’ ಸಾಂಸ್ಕೃತಿಕ ಕಾರ್ಯಕ್ರಮದ ಆರನೇ ದಿನವಾಗಿತ್ತು.


ಶುಕ್ರವಾರ 13 ಅಕ್ಟೋಬರ್ 2023

ಬಿಹಾರದ ‘ಧೈ ಅಖರ್ ಪ್ರೇಮ್’ ಪಾದಯಾತ್ರೆಯ ಏಳನೇ ದಿನದಂದು ಬೆಳಿಗ್ಗೆ, ಸಿಸ್ವಾ ಪೂರ್ವ ಪಂಚಾಯತ್‌ನಲ್ಲಿ ರಾತ್ರಿ ವಿಶ್ರಾಂತಿಯ ನಂತರ ಜಾತಾ ಪ್ರಭಾತ್ ಪೇರಿಯಾಗಿ ಹೊರಟಿತು. ಈ ವೇಳೆ ಗ್ರಾಮಸ್ಥರೊಂದಿಗೆ ಸಂವಾದ ನಡೆಸಲಾಯಿತು. ಇಲ್ಲಿಂದ ಜಾತಾ ತನ್ನ ಮುಂದಿನ ಸ್ಟಾಪ್ ಸುರ್ಹಾಗೆ ಪ್ರಾರಂಭವಾಯಿತು. ‘ಗಂಗಾ ಕಿ ಕಸಮ್, ಯಮುನಾ ಕಿ ಕಸಮ್, ಯೇ ತಾನಾ ಬನಾ ಬದ್ಲೇಗಾ, ತೂ ಖುದ್ ಕೋ ಬದ್ಲೇಗಾ, ತಬ್ ತೋ ಯೇ ಜಮಾನಾ ಬದ್ಲೇಗಾ. ಹಾಡುತ್ತಾ ಪ್ರಯಾಣ ಆರಂಭಿಸಿದರು.  ಈ ಸಮಯಗಳು ಎಷ್ಟು ಕೆಟ್ಟದಾಗಿ ಕಾಣಿಸಬಹುದು ಅಥವಾ ಈ ಜಗತ್ತನ್ನು ಕಳಂಕಗೊಳಿಸಲು ಎಷ್ಟು ಪ್ರಯತ್ನಗಳು ನಡೆದರೂ ಪರವಾಗಿಲ್ಲ; ಆದರೆ ನಾವು ಪ್ರತಿಯೊಬ್ಬ ವ್ಯಕ್ತಿಯನ್ನು, ಜನರ ನಡುವೆ ತಲುಪುವ ಮೂಲಕ ನಮ್ಮ ಸಾಂಸ್ಕೃತಿಕ ಪರಂಪರೆಯ ಕಥೆಯನ್ನು ಹೇಳುವುದನ್ನು ಮುಂದುವರಿಸುತ್ತೇವೆ.  ನಮ್ಮ ಬಹುವರ್ಣದ ಸಂಸ್ಕೃತಿಯನ್ನು ಉಳಿಸಲು ನಾವು ನಿರ್ಧರಿಸಿದ್ದೇವೆ. ಜಾತಾದ ಎಲ್ಲ ಸಹಚರರ ಮುಖದಲ್ಲಿ ಆ ವಿಶ್ವಾಸ ಮತ್ತು ನಂಬಿಕೆ ಇತ್ತು. ಚಿಕ್ಕವರಿರಲಿ, ದೊಡ್ಡವರಿರಲಿ ಜಾತಾದ ಸದಸ್ಯರೆಲ್ಲರೂ ಒಂದೇ ಉತ್ಸಾಹದಿಂದ ಒಟ್ಟಿಗೆ ಸಾಗುತ್ತಿದ್ದರು. ಎಲ್ಲಿಯೂ ಆಯಾಸದ ಲಕ್ಷಣಗಳಿಲ್ಲ.

ಜಾತಾ ತನ್ನ ಕೊನೆಯ ನಿಲ್ದಾಣವಾದ ಮೋತಿಹಾರಿ ಕಡೆಗೆ ತನ್ನ ಬಾಪುವಿನ ಕರ್ಮಭೂಮಿ ಕಡೆಗೆ ಚಲಿಸುತ್ತಿತ್ತು. ವಾಸ್ತವವಾಗಿ, ಈ ಸಂಪೂರ್ಣ ಪ್ರದೇಶವು ಬಾಪು ಅವರ ಹೆಜ್ಜೆಗುರುತುಗಳನ್ನು ನೀಡುತ್ತದೆ. ಇಲ್ಲಿನ ಮಣ್ಣಿಗೆ ಬಾಪು ಅವರ ತ್ಯಾಗ ಮತ್ತು ತ್ಯಾಗದ ಪರಿಮಳವಿದೆ. ಇಂದಿಗೂ ಪ್ರತಿಯೊಂದು ಹಳ್ಳಿಯೂ ಗಾಂಧಿಯನ್ನು ತನ್ನ ಸರ್ವಸ್ವವೆಂದು ಪರಿಗಣಿಸುತ್ತದೆ.

‘ಧೈ ಅಖರ್ ಪ್ರೇಮ್’ ಸಾಂಸ್ಕೃತಿಕ ತಂಡವು ಸಿಸ್ವಾದಿಂದ ಪ್ರಾರಂಭವಾಗಿ ಸುರ್ಹಾನ್ ಗ್ರಾಮಕ್ಕೆ ಬಂದು ಜನರನ್ನು ಭೇಟಿ ಮಾಡಿತು. ಇಲ್ಲಿ ಜಾತಾದ ಒಡನಾಡಿಗಳು ಹರಿಹರ ಪ್ರಸಾದ್, ಬಾಬುಲಾಲ್ ಮಹತೋ, ಖೇದು ಮಹತೋ ಅವರೊಂದಿಗೆ ಮಾತನಾಡಿದರು. ಅವರೆಲ್ಲರೂ ಕೂಲಿ ಕಾರ್ಮಿಕರು. ನಿಮ್ಮ ಯಾತ್ರೆಗೆ ನಾವೆಲ್ಲರೂ ಸಂಪೂರ್ಣ ಬೆಂಬಲ ನೀಡುತ್ತೇವೆ ಎಂದು ಹೇಳಿದರು. ಈ ಪ್ರೀತಿಯನ್ನು ಹರಡಲು ದೇಶದ ಪ್ರತಿಯೊಬ್ಬರೂ ಪ್ರತಿಜ್ಞೆ ಮಾಡಿದರೆ, ಭಯೋತ್ಪಾದಕರು ತಕ್ಷಣವೇ ಕೊನೆಗೊಳ್ಳುತ್ತಾರೆ. ನಮ್ಮ ಗ್ರಾಮ ಬಡಗ್ರಾಮ ಎಂದರು. ಇಡೀ ಗ್ರಾಮದ ಜನಸಂಖ್ಯೆ ಸುಮಾರು 1200, ಆದರೆ ಕೇವಲ 4-5 ಜನರು ಮಾತ್ರ ಕೆಲಸ ಮಾಡುತ್ತಿದ್ದಾರೆ. ಹೆಚ್ಚಿನ ಜನರು ಜೀವನೋಪಾಯಕ್ಕಾಗಿ ಮೋತಿಹಾರಿ ನಗರಕ್ಕೆ ಹೋಗುತ್ತಾರೆ. ಇರುವ ಅಲ್ಪಸ್ವಲ್ಪ ಭೂಮಿಯಲ್ಲಿ ಗೋಧಿ, ಭತ್ತ, ಜೋಳ, ಕಬ್ಬು ಇತ್ಯಾದಿ ಬೆಳೆದು ಬದುಕುತ್ತಿದ್ದೇವೆ. ಇಲ್ಲಿ ಪ್ರತಿ ವರ್ಷ ಪ್ರವಾಹ ಬರುತ್ತಿದೆ ಆದರೆ ಕಳೆದ ಎರಡು ವರ್ಷಗಳಿಂದ ಬರದ ಕಾರಣ ಭತ್ತ ಬೆಳೆಯಲಾಗುತ್ತಿದೆ. ಪ್ರವಾಹಗಳು ಸಂಭವಿಸಿದಾಗ, ಜನರು ತಮ್ಮ ಪ್ರಾಣಿಗಳು ಮತ್ತು ಅವರು ಉಳಿಸಬಹುದಾದ ಯಾವುದೇ ಗೃಹೋಪಯೋಗಿ ವಸ್ತುಗಳ ಜೊತೆಗೆ ಸುರಕ್ಷಿತ ಸ್ಥಳಗಳಿಗೆ ತೆರಳುತ್ತಾರೆ. ಇಲ್ಲಿ ಒಂದು ಮಧ್ಯಮ ಶಾಲೆ ಇದೆ, ಅಲ್ಲಿ ಮಕ್ಕಳು ಓದಲು ಹೋಗುತ್ತಾರೆ. ನಮ್ಮ ಹಳ್ಳಿಯ ಒಂದು ವಿಶೇಷವೆಂದರೆ ನಾವು ಒಟ್ಟಿಗೆ ವಾಸಿಸುತ್ತೇವೆ. ಎಲ್ಲರೂ ಪರಸ್ಪರ ಸಹಾಯ ಮಾಡುತ್ತಾರೆ. ಪರಸ್ಪರ ಸಹಾಯವನ್ನು ಹೊರತುಪಡಿಸಿ ನಮಗೆ ಏನು ಇದೆ? ನಾವು ನಮ್ಮ ಸಹೋದರತ್ವ ಮತ್ತು ಪ್ರೀತಿಯನ್ನು ಮರೆತರೆ ನಾವು ಹೇಗೆ ಬದುಕಬೇಕು?

ಜಾತಾದ ಯುವ ಸ್ನೇಹಿತರು ಮೊದಲ ಬಾರಿಗೆ ಹೊಸ ಪ್ರಪಂಚವನ್ನು ನೋಡುತ್ತಿದ್ದರು. ನಗರಗಳಲ್ಲಿ ಕಾಣುವ ಜಗತ್ತಿಗೆ ಮತ್ತು ನಗರಗಳಲ್ಲಿ ಕಾಣುವ ಮಿನುಗುವಿಕೆಗಾಗಿ ಹಳ್ಳಿಗಳು ತ್ಯಾಗ ಮಾಡಬೇಕು. ನಂತರ ಮುಂದಿನ ತಿರುವಿನಲ್ಲಿದ್ದ ಆಲದ ಮರದ ಕೆಳಗೆ ಜಾತಾ ಕಾರ್ಯಕ್ರಮ ಆರಂಭಿಸಿತು. ಆಗ ನಡೆಯಲು ಸಂಪೂರ್ಣ ಅಸಹಾಯಕರಾಗಿದ್ದ ರಾಮ್ ದೇವ್ ಗಿರಿ ಹೇಗೋ ಕೋಲಿನ ಸಹಾಯದಿಂದ ಸ್ಥಳ ತಲುಪಿದರು. ಕೆಲವರು ನೀರು ತಂದರು. ಹಳ್ಳಿ ಹುಡುಗಿಯರು ಕುರ್ಚಿಗಳನ್ನು ತೆಗೆದು ಕೊಡುತ್ತಿದ್ದರು. ಇದ್ದವರು ತಮ್ಮ ಒಡನಾಡಿಗಳಿಗೆ ಕೊಟ್ಟು ಒಗ್ಗಟ್ಟು ಪ್ರದರ್ಶಿಸುತ್ತಿದ್ದರು. ಅವರು ಬಡವರು, ಸೀಮಿತ ಸಂಪನ್ಮೂಲಗಳನ್ನು ಹೊಂದಿರುವ ಜನರು, ಮಧ್ಯವರ್ತಿಗಳಿಂದ ಬಲಿಯಾದ ಜನರು. ಆದರೆ ಜೀವನ ಮತ್ತು ಪ್ರೀತಿಗೆ ಅವರ ಸಮರ್ಪಣೆ ಹೊಸ ಭರವಸೆಯನ್ನು ಜಾಗೃತಗೊಳಿಸುತ್ತದೆ.

ನಂತರ ಮುಂದಿನ ತಿರುವಿನಲ್ಲಿದ್ದ ಆಲದ ಮರದ ಕೆಳಗೆ ಜಾತಾ ಕಾರ್ಯಕ್ರಮ ಆರಂಭಿಸಿತು. ಆಗ ನಡೆಯಲು ಸಂಪೂರ್ಣ ಅಸಹಾಯಕರಾಗಿದ್ದ ರಾಮ್ ದೇವ್ ಗಿರಿ ಹೇಗೋ ಕೋಲಿನ ಸಹಾಯದಿಂದ ಸ್ಥಳ ತಲುಪಿದರು. ಕೆಲವರು ನೀರು ತಂದರು. ಹಳ್ಳಿ ಹುಡುಗಿಯರು ಕುರ್ಚಿಗಳನ್ನು ತೆಗೆದು ಕೊಡುತ್ತಿದ್ದರು. ಇದ್ದವರು ತಮ್ಮ ಒಡನಾಡಿಗಳಿಗೆ ಕೊಟ್ಟು ಒಗ್ಗಟ್ಟು ಪ್ರದರ್ಶಿಸುತ್ತಿದ್ದರು. ಅವರು ಬಡವರು, ಸೀಮಿತ ಸಂಪನ್ಮೂಲಗಳನ್ನು ಹೊಂದಿರುವ ಜನರು, ಮಧ್ಯವರ್ತಿಗಳಿಂದ ಬಲಿಯಾದ ಜನರು. ಆದರೆ ಜೀವನ ಮತ್ತು ಪ್ರೀತಿಗೆ ಅವರ ಸಮರ್ಪಣೆ ಹೊಸ ಭರವಸೆಯನ್ನು ಜಾಗೃತಗೊಳಿಸುತ್ತದೆ.

ಸ್ಥಳೀಯ ಜನರು ವೃತ್ತದಲ್ಲಿ ನಿಂತು ಕಾರ್ಯಕ್ರಮವನ್ನು ವೀಕ್ಷಿಸಿದರು ಮತ್ತು ಅದನ್ನು ತುಂಬಾ ಇಷ್ಟಪಟ್ಟರು. ಪ್ರಸ್ತುತಿಗಳ ನಂತರ ರಿತೇಶ್ ರಂಜನ್ ಅವರು ‘ಧೈ ಅಖರ್ ಪ್ರೇಮ್’ ಸಾಂಸ್ಕೃತಿಕ ಮೆರವಣಿಗೆಯ ಬಗ್ಗೆ ಜನರಿಗೆ ತಿಳಿಸಿದರು. ನಂತರ ಶಿವಾನಿ ಮತ್ತು ಗೆಳೆಯರು ಹಾಡನ್ನು ಹಾಡಿದರು. ‘ಧೈ ಅಖರ್ ಪ್ರೇಮ್ ಕೆ ಪಡನೆ ಔರ್ ಪಡಾನೇ ಆಏ ಹೈ, ಹಮ್ ಭಾರತ್ ಸೆ ನಾಫರಾತ್ ಕ ಹರ್ ದಾಗ್ ಮಿತಾನೆ ಆಏ ಹೈ”  ಹಾಡನ್ನು ಹಾಡಿದರು. ಇನ್ನೊಂದು ಹಾಡನ್ನೂ ಪ್ರಸ್ತುತಪಡಿಸಲಾಯಿತು. ‘ಗಂಗಾ ಕಿ ಕಸಮ್, ಯಮುನಾ ಕಿ ಕಸಮ್, ಯೇ ತಾನಾ ಬನಾ ಬದ್ಲೇಗಾ, ತೂ ಖುದ್ ಕೋ ಬದ್ಲೇಗಾ, ತಬ್ ತೋ ಯೇ ಜಮಾನಾ ಬದ್ಲೇಗಾ” ನಿಸಾರ್ ಅಲಿ ಮಾತನಾಡಿ “ದೂರದಿಂದ ಬಂದಿದ್ದೇವೆ, ಇದು ಮಾರುಕಟ್ಟೆ ಸಮಯ, ಇದು ಖರೀದಿ ಮತ್ತು ಮಾರಾಟದ ಸಮಯ. ಇಂತಹ ಪರಿಸ್ಥಿತಿಯಲ್ಲಿ ನಾವು ಮಾರುಕಟ್ಟೆಗೆ ಪರ್ಯಾಯವನ್ನು ಹುಡುಕಬೇಕಾಗಿದೆ. ಮನುಷ್ಯ ಮತ್ತು ಅವನ ಕಲೆಯನ್ನು ಸರಕು ಅಥವಾ ಗ್ರಾಹಕ ವಸ್ತುವಾಗಿ ಪರಿವರ್ತಿಸುವ ಮಾರುಕಟ್ಟೆ. ಎಂಬ ಸಂದೇಶ ತಂದಿದ್ದೇವೆ. ಸಂಜೆ 6 ಗಂಟೆಗೆ ಅಲ್ಲಿಂದ ಹೊರಟ ತಂಡ ಮೋತಿಹಾರಿ ನಗರದ ಮೂಲಕ ಹಾದು ಎನ್‌ಸಿಸಿ ಕ್ಯಾಂಪಸ್ ರಾಜಾ ಬಜಾರ್ ತಲುಪಿತು. ಇಲ್ಲಿ ಸಂಜೆ ಬೀದಿಯಲ್ಲಿ ಕಾರ್ಯಕ್ರಮ ನಡೆಯಿತು. ಮೊದಲಿಗೆ ತಂಡದ ಹಿರಿಯ ಸಹ ಗಾಯಕ ರಾಜೇಂದ್ರ ಪ್ರಸಾದ್ ಅವರು ‘ಲಿಹ್ಲೇ ದೇಸ್ವಾ ಕೆ ಅಜ್ದಿಯಾ, ಖಾದಿಯಾ ಪಹೀಂ ಕೆ ಜಿ’ ಹಾಡನ್ನು ಹಾಡಿದರು, ಅವರು ಎರಡನೇ ಗೀತೆ ‘ಹಮ್ರಾ ಹೀರಾ ಹೆರಾ ಗೈಲ್ ಕಚ್ರೇ ಮೇ’ ಅನ್ನು ಸಹ ಪ್ರಸ್ತುತಪಡಿಸಿದರು. ಆ ನಂತರ ನಿಸಾರ್ ಅಲಿ ಮತ್ತು ದೇವನಾರಾಯಣ ಸಾಹು ಅವರು ಛತ್ತೀಸ್‌ಗಢಿ ನಾಟಕ ‘‘ಧೈ ಅಖರ್ ಪ್ರೇಮ್’ ಪ್ರಸ್ತುತಪಡಿಸಿದರು. ಆ ಬಳಿಕ ‘ರಸ್ತೆಯಲ್ಲಿ ಹಸಿವು ನೀಗಿಸಿಕೊಳ್ಳಲು ಆಗುವುದಿಲ್ಲ, ಅಂತಹ ಮುಂಜಾನೆ ಇಲ್ಲಿ ಬರಲಿ ಎಂಬುದು ನಮ್ಮ ಪ್ರಯತ್ನ’ ಎಂದು ನಿರೂಪಿಸಿದರು.

IPTA ರಾಷ್ಟ್ರೀಯ ಕಾರ್ಯದರ್ಶಿ ಶೈಲೇಂದ್ರ ಕುಮಾರ್ ಅವರು ಮಹಾತ್ಮ ಗಾಂಧಿಯವರ ಮಾತನ್ನು ಉಲ್ಲೇಖಿಸಿ ಹೇಳಿದರು, ‘ಬಾಪು ತನ್ನನ್ನು ತಾನು ಹಿಂದೂ ಎಂದು ಪರಿಗಣಿಸಿದ್ದರು ಮತ್ತು ಅವರು ಇದನ್ನು ಬಹಿರಂಗವಾಗಿ ಹೇಳುತ್ತಿದ್ದರು. ಆದರೆ ನಾನು ನನ್ನನ್ನು ಹಿಂದೂ ಮಾತ್ರವಲ್ಲ, ಕ್ರಿಶ್ಚಿಯನ್, ಮುಸ್ಲಿಂ, ಯಹೂದಿ, ಸಿಖ್, ಪಾರ್ಸಿ, ಜೈನ್ ಅಥವಾ ಇತರ ಯಾವುದೇ ಧಾರ್ಮಿಕ ಪಂಥದ ಅನುಯಾಯಿ ಎಂದು ಪರಿಗಣಿಸುತ್ತೇನೆ ಎಂದು ಅವರು ಪದೇ ಪದೇ ಹೇಳಿದರು. ಇದರರ್ಥ ನಾನು ಎಲ್ಲಾ ಇತರ ಧರ್ಮಗಳು ಮತ್ತು ಪಂಗಡಗಳ ಒಳಿತನ್ನು ಹೀರಿಕೊಂಡಿದ್ದೇನೆ. ಈ ರೀತಿಯಾಗಿ ನಾನು ಪ್ರತಿಯೊಂದು ರೀತಿಯ ಸಂಘರ್ಷವನ್ನು ತಪ್ಪಿಸುತ್ತೇನೆ ಮತ್ತು ಧರ್ಮದ ಕಲ್ಪನೆಯನ್ನು ವಿಸ್ತರಿಸುತ್ತೇನೆ. ಅವರು ಇದನ್ನು ಜನವರಿ 10, 1947 ರಂದು ಹೇಳಿದ್ದರು. ಅದೇನೆಂದರೆ, ಒಂದು ಧರ್ಮವನ್ನು ಅನುಸರಿಸುವುದು ಎಂದರೆ ನಾವು ಇತರ ಧರ್ಮಗಳ ವಿರುದ್ಧ ಇರಬೇಕು ಎಂದಲ್ಲ. ಒಟ್ಟಿಗೆ ಬಾಳಬೇಕಾದರೆ ಪರಸ್ಪರ ಪ್ರೀತಿಯಿಂದ ಬಾಳಬೇಕು.

ಈ ‘‘ಧೈ ಅಖರ್ ಪ್ರೇಮ್’ ಬಿಹಾರ ಜಾತಾದ ಪಾದಯಾತ್ರೆ ಅಕ್ಟೋಬರ್ 14 ರಂದು ಮೋತಿಹಾರಿಯಲ್ಲಿ ಸಮಾರೋಪಗೊಳ್ಳಲಿದೆ, ಆದ್ದರಿಂದ ರಿತೇಶ್ ರಂಜನ್ ಅವರು ಸಮಾರೋಪ ಕಾರ್ಯಕ್ರಮಕ್ಕೆ ಬರಲು ಎಲ್ಲರಿಗೂ ಆಹ್ವಾನ ನೀಡಿದರು. ಬಿಹಾರ ಇಪ್ಟಾದ ಹಂಗಾಮಿ ಪ್ರಧಾನ ಕಾರ್ಯದರ್ಶಿ ಫಿರೋಜ್ ಅಖ್ತರ್ ಖಾನ್ ಅವರು ಸಮಾರೋಪದಲ್ಲಿ ಭ್ರಾತೃತ್ವದ ಬಗ್ಗೆ ಮಾತನಾಡುತ್ತಾರೆ, ಸಮಾನತೆಯ ಬಗ್ಗೆ ಮಾತನಾಡುತ್ತಾರೆ ಮತ್ತು ಅಂತಿಮವಾಗಿ ಪ್ರೀತಿಯ ಬಗ್ಗೆ ಮಾತನಾಡುತ್ತಾರೆ. ಇದಾದ ನಂತರ ಪಾದಯಾತ್ರೆ ಮೋತಿಹಾರಿ ನಗರವನ್ನು ತಲುಪಿತು. ಸಮಾರೋಪ ಸಮಾರಂಭವನ್ನು ಗಾಂಧಿ ಮ್ಯೂಸಿಯಂ ಮೋತಿಹಾರಿಯಲ್ಲಿ 14 ಅಕ್ಟೋಬರ್ 2023 ರಂದು ಮಧ್ಯಾಹ್ನ 02 ಗಂಟೆಗೆ ಆಯೋಜಿಸಲಾಗಿದೆ.


14 ಅಕ್ಟೋಬರ್ 2023 ಶನಿವಾರ

ಧೈ ಅಖರ್ ಪ್ರೇಮ್ ಜಾಥಾ ಅಕ್ಟೋಬರ್ 14 ರಂದು ಪ್ರಭಾತ್ ಫೇರಿಯೊಂದಿಗೆ ಪ್ರಾರಂಭವಾಯಿತು. ಬೆಳಗ್ಗೆ 07 ಗಂಟೆಯಿಂದ ತಂಡದ ಎಲ್ಲ ಸದಸ್ಯರು ನಗರದ ವಿವಿಧ ಮಾರ್ಗಗಳಲ್ಲಿ ಸಂಚರಿಸಿದರು. ಮೋತಿಹಾರಿ ಗಾಂಧೀಜಿಯವರ ಕಾರ್ಯಗಳ ಸ್ಮಾರಕ ಸ್ಥಳವಾಗಿದೆ. ಇಲ್ಲಿ ಚಂಪಾರಣ್ ಸತ್ಯಾಗ್ರಹಕ್ಕೆ ಸಂಬಂಧಿಸಿದ ನೆನಪುಗಳು ಮಾತ್ರವಲ್ಲ, ಇಂಡಿಗೋ ಕೃಷಿ ಮಾಡುವ ರೈತರ ನೋವು ಮತ್ತು ಹೋರಾಟವೂ ಇದೆ. ಅದರ ನಂತರ, ಮೋತಿಹಾರಿ ಇಡೀ ಸ್ವಾತಂತ್ರ್ಯ ಚಳವಳಿಯಲ್ಲಿ ಗಾಂಧೀಜಿ ನಿರ್ವಹಿಸಿದ ಪ್ರಮುಖ ಪಾತ್ರದ ಸ್ಮರಣೀಯ ಕೇಂದ್ರವಾಗಿದೆ. ಅವರ ಯಶಸ್ಸಿನ ಜೀವಂತ ದಾಖಲೆ ಮತ್ತು ಬ್ರಿಟಿಷ್ ಸಾಮ್ರಾಜ್ಯಶಾಹಿಯಿಂದ ಭಾರತವು ವಿಮೋಚನೆಗೊಂಡ ಮೋತಿಹಾರಿ ಜನರು, ಪ್ರತಿ ಹಳ್ಳಿಯಲ್ಲಿ ಗಾಂಧೀಜಿಯವರ ಹೋರಾಟಗಳೊಂದಿಗೆ ಹೆಜ್ಜೆ ಹಾಕುತ್ತಿದ್ದರು. ಚಂಪಾರಣ್ ಸತ್ಯಾಗ್ರಹ, 1917, ರಾಷ್ಟ್ರಪಿತ ಮಹಾತ್ಮ ಗಾಂಧಿಯವರು ಪ್ರಾರಂಭಿಸಿದ ಸತ್ಯ ಮತ್ತು ಅಹಿಂಸೆಯ ಆಧಾರದ ಮೇಲೆ ಮೊದಲ ಯಶಸ್ವಿ ಸತ್ಯಾಗ್ರಹವಾಗಿದೆ. ಈ ಸತ್ಯಾಗ್ರಹದೊಂದಿಗೆ, ಭಾರತೀಯ ರಾಜಕೀಯದಲ್ಲಿ ಗಾಂಧಿ ಯುಗ ಪ್ರಾರಂಭವಾಯಿತು, ಇದರಲ್ಲಿ ಜಾತಿ, ಪಂಗಡ, ಧರ್ಮ, ಲಿಂಗ ಮತ್ತು ಪ್ರಾದೇಶಿಕ ತಾರತಮ್ಯಕ್ಕೆ ಸ್ಥಳವಿಲ್ಲ.

ಇಂದು ಬಿಹಾರದಲ್ಲಿ ‘‘ಧೈ ಅಖರ್ ಪ್ರೇಮ್’ ಸಾಂಸ್ಕೃತಿಕ ತಂಡ ಅಂತ್ಯವಾಗಿದೆ. ಈ ಜಾತಾ 07 ಅಕ್ಟೋಬರ್ 2023 ರಂದು ಪಾಟ್ನಾ ರೈಲು ನಿಲ್ದಾಣಕ್ಕೆ (ಹಿಂದಿನ ಹೆಸರು – ಬಂಕಿಪುರ ಜಂಕ್ಷನ್) ಹೋಗಿ ಗಾಂಧೀಜಿಯವರ ಪ್ರತಿಮೆಗೆ ಪುಷ್ಪಗಳನ್ನು ಅರ್ಪಿಸುವ ಮೂಲಕ ಪಾಟ್ನಾದಿಂದ ಪ್ರಾರಂಭವಾಯಿತು. ತಂಡವು ಪಾಟ್ನಾ ರೈಲು ನಿಲ್ದಾಣದಿಂದ ಪ್ರಾರಂಭವಾಯಿತು ಏಕೆಂದರೆ ಮೊದಲ ಬಾರಿಗೆ 10 ಏಪ್ರಿಲ್ 1917 ರಂದು ಕೋಲ್ಕತ್ತಾದಿಂದ ಚಂಪಾರಣ್‌ಗೆ ಹೋಗುವಾಗ ಪಾಟ್ನಾ ಜಂಕ್ಷನ್‌ಗೆ ಗಾಂಧೀಜಿ ಆಗಮಿಸಿದ್ದರು.        ಮಹಾತ್ಮಾ ಗಾಂಧಿಯವರು ಬ್ರಿಟಿಷರ ಆಡಳಿತದ ವಿರುದ್ಧ ನಡೆಸಲಾಗುತ್ತಿರುವ ಇಂಡಿಗೋ ಚಳವಳಿಯ ಮಹಾನ್ ಸ್ವಾತಂತ್ರ್ಯ ಹೋರಾಟಗಾರ ರಾಜ್‌ಕುಮಾರ್ ಶುಕ್ಲಾ ಅವರೊಂದಿಗೆ 10 ಏಪ್ರಿಲ್ 1917 ರ ಬೆಳಿಗ್ಗೆ ಪಾಟ್ನಾ ನಿಲ್ದಾಣವನ್ನು ತಲುಪಿದರು ಮತ್ತು ಇಂಡಿಗೋ ಕೃಷಿಗೆ ಸಂಬಂಧಿಸಿದ ಸಂಗತಿಗಳನ್ನು ಕಂಡುಹಿಡಿಯಲು ಮುಜಾಫರ್‌ಪುರ ಮೂಲಕ ಚಂಪಾರಣ್‌ಗೆ ಹೋದರು. ಅವರ ಸ್ಮರಣಾರ್ಥ ಬಿಹಾರದಲ್ಲಿ ಆರಂಭವಾದ ತಂಡವು ಪಾಟ್ನಾ ರೈಲು ನಿಲ್ದಾಣದ ಮೂಲಕ ಗಾಂಧಿ ಮೈದಾನ ತಲುಪಿ ಭಗತ್ ಸಿಂಗ್ ಮತ್ತು ಗಾಂಧೀಜಿಯವರ ಪ್ರತಿಮೆಗಳಿಗೆ ಮಾಲಾರ್ಪಣೆ ಮಾಡಿ ಗಾಂಧಿ ಮೈದಾನದಲ್ಲಿ ಹಾಡು-ಸಂಗೀತ-ಸಂವಾದ ಕಾರ್ಯಕ್ರಮ ನಡೆಸಿತು.

ಅಕ್ಟೋಬರ್ 14 ರಂದು ಮೋತಿಹಾರಿಯಲ್ಲಿ ಬೆಳಿಗ್ಗೆ ಪ್ರಭಾತ್ ಪೇರಿ ಸಮಯದಲ್ಲಿ ಜಾತಾ ಜನರೊಂದಿಗೆ ಸಂಪರ್ಕವನ್ನು ಸ್ಥಾಪಿಸಿತು. ಗಾಂಧೀಜಿಯವರಿಗೆ ಸಂಬಂಧಿಸಿದ ಸ್ಥಳಗಳ ಮೂಲಕ ಸಾಗಿದ ಗಾಯನ ತಂಡದ ಗೆಳೆಯರು ಮಧ್ಯಾಹ್ನ 2 ಗಂಟೆಗೆ ಸಮಾರೋಪ ಕಾರ್ಯಕ್ರಮಕ್ಕಾಗಿ ಗಾಂಧಿ ವಸ್ತು ಸಂಗ್ರಹಾಲಯಕ್ಕೆ ಮರಳಿದರು.

ಈ ‘‘ಧೈ ಅಖರ್ ಪ್ರೇಮ್’ ಸಾಂಸ್ಕೃತಿಕ ತಂಡವು ಎಲ್ಲಾ ಪಾದಚಾರಿಗಳಿಗೆ ಹಲವು ಹೊಸ ಪಾಠಗಳನ್ನು ಕಲಿಸಿತು. ಈ ಪ್ರವಾಸವು ನನ್ನ ದೇಶವನ್ನು ಅರ್ಥಮಾಡಿಕೊಳ್ಳಲು, ಅದರ ಬಹುಸಂಸ್ಕೃತಿ, ಬಹುಭಾಷಾ ರೂಪಗಳನ್ನು ನೋಡಲು ಮತ್ತು ಅರ್ಥಮಾಡಿಕೊಳ್ಳಲು ನನಗೆ ಸಹಾಯ ಮಾಡುತ್ತಿದೆ. ಈ ಪ್ರಯಾಣವು ನಮ್ಮ ಸಮಾಜವು ವಿವಿಧ ಸಂದರ್ಭಗಳಲ್ಲಿ ಹೇಗೆ ಬದುಕುಳಿಯುತ್ತದೆ ಮತ್ತು ಅತ್ಯಂತ ಕಷ್ಟದ ಸಮಯದಲ್ಲಿಯೂ ತನ್ನ ಏಕತೆಯನ್ನು ಹೇಗೆ ಕಾಪಾಡಿಕೊಳ್ಳುತ್ತದೆ ಎಂಬುದನ್ನು ನಮಗೆ ಕಲಿಸಿತು.

ಚಂಪಾರಣ್‌ನ ಪ್ರತಿಯೊಂದು ಭಾಗದಲ್ಲೂ ಕಸ್ತೂರ್ಬಾ ಇದ್ದಾರೆ, ರಾಜಕುಮಾರ್ ಶುಕ್ಲಾ ಇದ್ದಾರೆ, ಗೋರಖ್ ಪ್ರಸಾದ್ ಇದ್ದಾರೆ, ಶೇಖ್ ಗುಲಾಮ್ ಇದ್ದಾರೆ, ಲೋಮರಾಜ್ ಸಿಂಗ್ ಇದ್ದಾರೆ, ಹರಿವಂಶ್ ರಾಯ್ ಇದ್ದಾರೆ, ಶೀತಲ್ ರೈ ಇದ್ದಾರೆ, ಧರಣೀಧರ ಪ್ರಸಾದ್ ಇದ್ದಾರೆ, ರಾಮನವಮಿ ಬಾಬು ಇದ್ದಾರೆ. ಅಲ್ಲಿ ಬದಕ್ ಮಿಯಾನ್ ಇದ್ದಾರೆ, ಅನ್ಸಾರಿ ಇದ್ದಾರೆ ಪರಸ್ಪರ ಒಗ್ಗಟ್ಟು ಮತ್ತು ಪ್ರೀತಿಯು ದೊಡ್ಡ ಯುದ್ಧಗಳನ್ನು ಗೆಲ್ಲಲು ನಮಗೆ ಸಹಾಯ ಮಾಡುತ್ತದೆ, ಆದರೆ ನಮ್ಮ ಅಪನಂಬಿಕೆ, ನಮ್ಮ ದ್ವೇಷ, ಜನರೊಳಗಿನ ಪರಕೀಯತೆಯು ಅವರನ್ನು ವಿಭಜನೆಗೆ ಕಾರಣವಾಗಬಹುದು ಎಂದು ಚಂಪಾರಣ್‌ನ ಗಾಂಧಿ-ಸತ್ಯಾಗ್ರಹವು ಮತ್ತೊಂದು ಪಾಠವನ್ನು ಕಲಿಸಿದೆ.  1947 ರಲ್ಲಿ, ಸುಮಾರು 13 ಮಿಲಿಯನ್ ಜನರು ನಿರಾಶ್ರಿತರಾದರು, ಸಾವಿರಾರು ಕೊಲೆಗಳು ನಡೆದವು, ಮಹಿಳೆಯರು ಅತ್ಯಾಚಾರಕ್ಕೊಳಗಾದರು.  ದೇಶವು ಈ ಭಯಾನಕತೆಯನ್ನು ಎದುರಿಸಬೇಕಾಯಿತು. ಜನರು ಬ್ರಿಟಿಷ್ ಸಾಮ್ರಾಜ್ಯಶಾಹಿಗಳನ್ನು ಸೋಲಿಸಿದ ಒಗ್ಗಟ್ಟಿನಿಂದ, ಆದರೆ ಅವರ ಸ್ವಾರ್ಥ ಮತ್ತು ದ್ವೇಷದಿಂದಾಗಿ ಅವರು ತಮ್ಮ ಸ್ವಂತ ಜನರೊಂದಿಗೆ ಸೋತರು. ಇದು ಚಂಪಾರಣ್ ಸತ್ಯಾಗ್ರಹದ ಪಾಠವಾಗಿದ್ದು, ಗುಂಪಿನೊಂದಿಗೆ ತೊಡಗಿಸಿಕೊಂಡಿರುವ ಒಡನಾಡಿಗಳು ಆಂತರಿಕವಾಗಿರುವುದಲ್ಲದೆ ಪಾಠವನ್ನೂ ಕಲಿತರು. ನಮ್ಮ ಒಗ್ಗಟ್ಟು, ನಮ್ಮ ಪ್ರೀತಿಯೇ ನಮ್ಮ ಶಕ್ತಿ. ಜಗತ್ತನ್ನು ಯುದ್ಧದಿಂದ ಗೆಲ್ಲುವುದಿಲ್ಲ, ಇದು ಚಂಪಾರಣ್ ಮತ್ತು ಗಾಂಧೀಜಿಯವರ ದೊಡ್ಡ ಸಂದೇಶವಾಗಿತ್ತು, ಇದು ಜಾತಾದ ಒಡನಾಡಿಗಳು ಹೊಸ ಗುಂಪುಗಳನ್ನು ಸೇರುವ ವಿಶ್ವಾಸದಿಂದ ಹಿಂತಿರುಗುತ್ತಿದ್ದರು.

ಸಮಾರೋಪ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಬಿಹಾರ ಇಪ್ಟಾದ ಹಂಗಾಮಿ ಪ್ರಧಾನ ಕಾರ್ಯದರ್ಶಿ ಫಿರೋಜ್ ಅಶ್ರಫ್ ಖಾನ್, ‘ಧೈ ಅಖರ್ ಪ್ರೇಮ್’ ತಂಡವು ಕವಿತೆ, ಹಾಡುಗಳು, ಸಂಗೀತ ಮತ್ತು ಸಂಭಾಷಣೆಗಳ ಮೂಲಕ ಯಾತ್ರೆಯಲ್ಲಿ ಜನಸಂಪರ್ಕವನ್ನು ನಡೆಸಿತು. ಈ ಪಾದಯಾತ್ರೆಯ ಸಮಾರೋಪ ಕಾರ್ಯಕ್ರಮದಲ್ಲಿ ನಿಮ್ಮೆಲ್ಲರನ್ನೂ ಸ್ವಾಗತಿಸುತ್ತೇವೆ. ಪ್ರೀತಿ, ಸೌಹಾರ್ದತೆ, ಸೌಹಾರ್ದತೆ ಕಾಪಾಡಲು ವಿವಿಧ ಜಾತ್ಯತೀತ ಸಂಘಟನೆಗಳು ಒಟ್ಟಾಗಿ ಈ ಯಾತ್ರೆ ಕೈಗೊಂಡಿವೆ. ಇಂದಿಗೂ ರೈತರ ಸಮಸ್ಯೆಗಳು ಹಾಗೆಯೇ ಉಳಿದಿವೆ ಎಂಬುದನ್ನು ಈ ಭೇಟಿಯಿಂದ ಅರಿತುಕೊಂಡೆವು.  ಸರ್ಕಾರಗಳು ರೈತರ ಹಿತಾಸಕ್ತಿಗಳ ಬಗ್ಗೆ ಕಾಳಜಿ ವಹಿಸುವುದಿಲ್ಲ, ಅವರು ಕೇವಲ ಸೋಗು ಹಾಕುತ್ತಾರೆ. ಅವರ ಹೆಸರಿನಲ್ಲಿ ನಿರ್ಧರಿಸುವ ಕಾರ್ಯಕ್ರಮಗಳು, ಅಥವಾ ಅವರ ಲಾಭದ ಹೆಸರಿನಲ್ಲಿ ಮಾಡುವ ನೀತಿಗಳು ಮಧ್ಯವರ್ತಿಗಳಿಂದ ತಿನ್ನುತ್ತವೆ. ಸರ್ಕಾರಗಳು, ಅವರ ಅಧಿಕಾರಿಗಳು ಮತ್ತು ಮಧ್ಯವರ್ತಿಗಳೆಲ್ಲರೂ ಆ ಲೂಟಿಯಲ್ಲಿ ಭಾಗಿಯಾಗಿದ್ದಾರೆ.

ಧೈ ಅಖರ್ ಪ್ರೇಮ್ ಪಾದಯಾತ್ರೆಯ ಸ್ಥಳೀಯ ಸಂಯೋಜಕರಾದ ಅಮರ್ ಜಿ ಅವರು ಯಾತ್ರೆಯನ್ನು ಯಶಸ್ವಿಗೊಳಿಸಲು ಅವಿರತವಾಗಿ ಶ್ರಮಿಸಿದ್ದಾರೆ. ಖಾಯಂ ಪ್ರಯಾಣಿಕರ ಗೌರವಾರ್ಥವಾಗಿ ಅವರು ತಮ್ಮ ಮಾತುಗಳನ್ನು ಹೇಳಿದರು, ‘ಚಂಪಾರಣ್ ಭೂಮಿಯನ್ನು ಆಯ್ಕೆ ಮಾಡಲು ನೀವು ತೆಗೆದುಕೊಂಡ ನಿರ್ಧಾರಕ್ಕೆ ಚಂಪಾರಣ್ ಜನರ ಪರವಾಗಿ ನಾವು ನಿಮ್ಮನ್ನು ಅಭಿನಂದಿಸುತ್ತೇವೆ. ಈ ದೇಶದಲ್ಲಿ ಇಂತಹ ವಿಷಮಯ ವಾತಾವರಣ ನಿರ್ಮಾಣವಾಗುತ್ತಿರುವ ಸಂದರ್ಭದಲ್ಲಿ ಗಾಂಧೀಜಿಯವರ ಹಾದಿಯನ್ನೇ ಅನುಸರಿಸುವ ನಿಮ್ಮ ನಿರ್ಧಾರ ಸ್ವಾಗತಾರ್ಹ. ನೀವು ಆ ಎಲ್ಲಾ ಸ್ಥಳಗಳಿಗೆ ಭೇಟಿ ನೀಡಿ ಜನರನ್ನು ಭೇಟಿ ಮಾಡಿ, ಆ ಐತಿಹಾಸಿಕ ಪುರುಷರ ಹಳ್ಳಿಗಳಿಗೆ ಭೇಟಿ ನೀಡಿ ಆ ಕ್ರಾಂತಿಕಾರಿಗಳನ್ನು ನೆನಪಿಸಿಕೊಂಡಿದ್ದೀರಿ, ಇದಕ್ಕಾಗಿ ನಾವು ನಿಮಗೆ ಕೃತಜ್ಞರಾಗಿರುತ್ತೇವೆ. ದಾರಿಯಲ್ಲಿ ಪ್ರಯಾಣಿಕರಿಗೆ ವಸತಿ ಅಥವಾ ಊಟದ ವ್ಯವಸ್ಥೆ ಮಾಡಿದವರಿಗೆ ಧನ್ಯವಾದಗಳು. ಯೋಗಿ ಮಾಂಝಿ, ಗಂಗಿಯಾ ದೇವಿ, ವಿನೋದ್ ಬಾಬು, ಮಂಕೇಶ್ವರ್ ಜಿ, ವಿನಯ್ ಕುಮಾರ್ ಜಿ ಅವರೆಲ್ಲರೂ ಮುಂದೆ ಬಂದು ಈ ಯಾತ್ರೆಯನ್ನು ಯಶಸ್ವಿಗೊಳಿಸಲು ಸಕ್ರಿಯ ಪಾತ್ರ ವಹಿಸಿದ್ದಾರೆ ಎಂದು ಅವರು ಕೃತಜ್ಞತೆ ಸಲ್ಲಿಸಿದರು.

ಮಧ್ಯಾಹ್ನ 02 ಗಂಟೆಗೆ ಸಮಾರೋಪ ಸಮಾರಂಭ ಆರಂಭಗೊಂಡಿದ್ದು, ಬಳಗದ ಸಂಗಡಿಗರೊಂದಿಗೆ ನಗರದ ಅಪಾರ ಸಂಖ್ಯೆಯ ಜನರು ಭಾಗವಹಿಸಿದ್ದರು. ಸಮಾರೋಪ ಸಮಾರಂಭಕ್ಕೂ ಮುನ್ನ ಮೆರವಣಿಗೆ ನಡೆಸುತ್ತಿದ್ದ ತಂಡ ಗಾಂಧಿ ಮ್ಯೂಸಿಯಂ ತಲುಪಿತು. ಬಳಿಕ ಅಲ್ಲಿನ ವೇದಿಕೆಯಲ್ಲಿ ಕಲಾವಿದರು ತಮ್ಮ ಕಾರ್ಯಕ್ರಮವನ್ನು ಪ್ರಸ್ತುತಪಡಿಸಿದರು.

ಎಲ್ಲಾ ಸಂಗಡಿಗರೊಂದಿಗೆ ಪ್ರಸ್ತುತಪಡಿಸಿದ ಮೊದಲ ಹಾಡು, ‘ಹಮ್ ಹೇ ಇಸ್ಕೆ ಮಾಲಿಕ್ ಹಿಂದೂಸ್ತಾನ್ ಹಮಾರಾ’. ಮುಂದಿನ ಪ್ರಸ್ತುತಿ, ‘ರಘುಪತಿ ರಾಘವ್ ರಾಜಾರಾಂ, ಪತಿತ್ ಪವನ್ ಸೀತಾರಾಮ್, ತೀನ್ ಕಥಿಯಾ ಲೇಲೇಬಾ ಪರ್ಣವ ರಾಮ್ ರಾಮ್ ಹರೇ ಹರೇ, ದೂಬಿ ಗಲೇ ಸಬೇರೆ ಕಿಸಾನ್ವ ರಾಮ್ ರಾಮ್ ಹರೇ ಹರೇ, ರಘುಪತಿ ರಾಘವ್ ರಾಜಾರಾಮ್, ಪತಿತ್ ಪವನ್ ಸೀತಾರಾಮ್, ವೈಷ್ಣವ್ ಜಾನ್ ತೋ ತೇನೇ ಕಹಿಯೇ ಜೀ ಪೀರ್ ಪರೈ ಜಾನೇ ರೇ. ‘ಗಂಗಾ ಕಿ ಕಸಮ್, ಯಮುನಾ ಕಿ ಕಸಮ್, ಯೇ ತಾನಾ ಬನಾ ಬದ್ಲೇಗಾ, ತೂ ಖುದ್ ಕೋ ಬದ್ಲೇಗಾ, ತಬ್ ತೋ ಯೇ ಜಮಾನಾ ಬದ್ಲೇಗಾ” ಎಂಬ ಮೂರನೇ ಪ್ರಸ್ತುತಿ ನಡೆಯಿತು.

ಆ ನಂತರ, ಸಾಮಾಜಿಕ ಸಂಸ್ಥೆ ಆಕ್ಷನ್ ಏಡ್‌ನ ಶರದ್ ಕುಮಾರಿ ಜಿ ಅವರು ತಮ್ಮ ಅಭಿಪ್ರಾಯಗಳನ್ನು ಮಂಡಿಸುತ್ತಾ, ‘ನಾನು ಎಲ್ಲಾ ಪಾದಚಾರಿಗಳನ್ನು ಅಭಿನಂದಿಸುತ್ತೇನೆ. ಇದೀಗ ವಿಶ್ವದೆಲ್ಲೆಡೆ ಸಹಿಷ್ಣುತೆ ಕಡಿಮೆಯಾಗುತ್ತಿದೆ. ಅಭಿವೃದ್ಧಿಯ ಹೆಸರಿನಲ್ಲಿ ತಾರತಮ್ಯ ಸೃಷ್ಟಿಸುತ್ತಿರುವ ರೀತಿ ದೇಶಕ್ಕೆ ಅತ್ಯಂತ ಅಪಾಯಕಾರಿ’ ಎಂದು ಕತಿಹಾರ್ ಕಾಲೇಜಿನ ಪ್ರಾಂಶುಪಾಲೆ ಚಂದನಾ ಝಾ ಶರದ್ ಕುಮಾರಿ ಜೀ ಅವರಿಗೆ ಬ್ಯಾಗ್ ಮತ್ತು ಟವಲ್ ನೀಡಿ ಗೌರವಿಸಿದರು. ಅಲ್ಲದೆ ರಾಮಾಯಣ ಸಿಂಗ್, ಹಮೀದ್ ರಜಾ, ಭರತ್ ರೈ ಅವರನ್ನೂ ಚಂದನಾ ಝಾ ಸನ್ಮಾನಿಸಿದರು.

ರಿತೇಶ್ ರಂಜನ್ ಕಾರ್ಯಕ್ರಮವನ್ನು ಮುನ್ನಡೆಸಿದರು. ನೃತ್ಯ ಪ್ರಸ್ತುತಿ ನಡೆಯಿತು. ಮುಂದಿನ ಪ್ರಸ್ತುತಿ ರಾಜೇಂದ್ರ ಪ್ರಸಾದ್ ಅವರ ಹಾಡು, ‘ಖಾದಿಯಾ ಪಾಹಿನ್ ಕೆ ಓ ಬಾಪು ಖಾದಿಯಾ ಪಾಹಿನ್ ಕೇ. ಲಿಹಲ್ ದೇಸ್ವಾ ಕೆ ಅಜಾದಿಯಾ ಬಾಪು ಖಾದಿಯಾ ಪಹೀಂ ಕೆ.’ ಲಕ್ಷ್ಮಿ ಪ್ರಸಾದ್ ಯಾದವ್ ಅವರು ‘ಬಧೆ ಚಲೋ ಜವಾನ್ ತುಮ್ ಬಧೆ ಚಲೋ, ಬಧೆ ಚಲೋ’ ಹಾಡನ್ನು ಪ್ರಸ್ತುತಪಡಿಸಿದರು ಮತ್ತು ನಂತರ ‘ಕೈಸೆ ಜೈಬೇ ಗೆ ಸಜಾನಿಯಾ ಪಹಡ್ ತೋಡೆ ಲಾ ಹೈ, ಹಮಾರಾ ಅಂಗೂರಿ ಸೇ ಖೂಂವಾ ಕೇ ಧರ್ ಬೆಹೆಲಾ” ಎಂಬ ಮತ್ತೊಂದು ಹಾಡನ್ನು ಹಾಡಿದರು.

ಧೈ ಅಖರ್ ಪ್ರೇಮ್’ ಎಂದು ಹೇಳುವ ಅಗತ್ಯವೇನಿದೆ’ ಎಂದು ಲಖನೌದಿಂದ ಬಂದಿದ್ದ ಸಾಮಾಜಿಕ ಕಾರ್ಯಕರ್ತ ನಾಸಿರುದ್ದೀನ್ ಪ್ರಶ್ನಿಸಿದರು. ನಾವು ಅಂತಹ ಗುಂಪಿನೊಂದಿಗೆ ಏಕೆ ಪ್ರಯಾಣಿಸಬೇಕು? ಅಷ್ಟಕ್ಕೂ ಇದರ ಅಗತ್ಯವೇನು? ಪ್ರೀತಿ ಮತ್ತು ಸಹಕಾರ ನಮ್ಮ ಜೀವನದಿಂದ ಮರೆಯಾಗುತ್ತಿದೆಯೇ? ಸಮಾಜದಲ್ಲಿ ವೈಷಮ್ಯಗಳು ಹೆಚ್ಚುತ್ತಿವೆಯೇ? ಇಂದು ಮಾಧ್ಯಮಗಳು ಸಂಪೂರ್ಣವಾಗಿ ದ್ವೇಷ ಹರಡುವ ಕೆಲಸ ಮಾಡುತ್ತಿವೆ. ಅವರು ದ್ವೇಷದ ಭಾಷೆಯನ್ನು ಕಲಿಸುತ್ತಿದ್ದಾರೆ. ದ್ವೇಷವನ್ನು ಮಾತ್ರ ಸೃಷ್ಟಿಸಲಾಗುತ್ತಿದೆ. ಸಾಮಾಜಿಕ ಮಾಧ್ಯಮಗಳು ಪಿತೂರಿಯಾಗಿ ನಮ್ಮ ಜೀವನದಲ್ಲಿ ಸಹೋದರತ್ವ ಮತ್ತು ಪ್ರೀತಿಯನ್ನು ನಾಶಮಾಡಲು ಪ್ರಯತ್ನಿಸುತ್ತವೆ. ‘ಧೈ ಅಖರ್ ಪ್ರೇಮ್’ ಅವರ ಈ ಜಾತಾ ಜನರಲ್ಲಿ ಪ್ರೀತಿ ಮೂಡಿಸಲು ಪ್ರಯತ್ನಿಸುತ್ತಿದೆ. ನಾವು ಬಾಪು ಅವರ ಹೆಜ್ಜೆಗಳನ್ನು ಅನುಸರಿಸಲು ಪ್ರಯತ್ನಿಸುತ್ತಿದ್ದೇವೆ.

ಮನೋಜ್ ಮುಂದಿನ ಪ್ರಸ್ತುತಿಯಾಗಿ ಕೈಚಳಕವನ್ನು ಪ್ರಸ್ತುತಪಡಿಸಿದರು. ಗಾಂಧಿ ವಸ್ತು ಸಂಗ್ರಹಾಲಯದ ಕಾರ್ಯದರ್ಶಿ ಬ್ರಜಕಿಶೋರ್ ಜಿ, ಜಸೌಲಿ ಪಟ್ಟಿಯ ಪರಸನಾಥ್ ಸಿಂಗ್ ಮತ್ತು ಡಾ.ಪರ್ವೇಜ್ ಅವರನ್ನು ಸನ್ಮಾನಿಸಲಾಯಿತು. ಗಾಂಧೀಜಿಯವರ ವಿಚಾರಗಳನ್ನು ಜನರಿಗೆ ತಲುಪಿಸುವ ಅವರ್ಣನೀಯ ಕಾರ್ಯ ಮಾಡಿದ ಬಳಗದ ಎಲ್ಲ ಸಹೋದ್ಯೋಗಿಗಳಿಗೆ ಬ್ರಜಕಿಶೋರ್ ಜೀ ಕೃತಜ್ಞತೆ ಸಲ್ಲಿಸಿದರು. ಮುಂದಿನ ಏಕವ್ಯಕ್ತಿ ಪ್ರಸ್ತುತಿ ರಾಜನ್ ಕುಮಾರ್ ಅವರ ‘ಭಗತ್ ಸಿಂಗ್’ ನಾಟಕವಾಗಿತ್ತು. ಇದರಲ್ಲಿ ಭಗತ್ ಸಿಂಗ್ ಅವರ ಕೊನೆಯ ಪತ್ರವನ್ನು ಒಂದೇ ನಾಟಕವಾಗಿ ಪ್ರಸ್ತುತಪಡಿಸಲಾಯಿತು. ಅಖಿಲೇಶ್ವರ್ ರಾಮ್ ತಮ್ಮ ಭಾಷಣದಲ್ಲಿ, ಇಂದು ದ್ವೇಷ ಮತ್ತು ಹಿಂಸಾಚಾರದ ಸಮಯದಲ್ಲಿ, ಗಾಂಧೀಜಿ ಮಾತ್ರ ನಮಗೆ ಮಾರ್ಗದರ್ಶಿಯಾಗಬಲ್ಲರು. ಸಮೂಹದ ಸಹೋದ್ಯೋಗಿಗಳು ತಮ್ಮ ಆಲೋಚನೆಗಳನ್ನು ಜನಸಾಮಾನ್ಯರಿಗೆ ತಲುಪಿಸಲು ಅಭಿನಂದನೆಗಳು. ‘ಕಿಸಾನ್ ನೃತ್ಯ’ವನ್ನು ತನ್ನು ಕುಮಾರಿ ಮತ್ತು ಅವರ ಸ್ನೇಹಿತರು ಪ್ರಸ್ತುತಪಡಿಸಿದರು, ಅವರ ಸಾಹಿತ್ಯ, ‘ದುನಿಯಾ ಕಾಯಂ ಬಾ ಕಿಸಾನ್ ಭಯ್ಯಾ, ದುನಿಯಾ ಕಾಯಂ ಬಾ ಕಿಸಾನ್ ಸೇ.

ಇದಾದ ನಂತರ ಶೈಲೇಂದ್ರಕುಮಾರ್ ಅವರನ್ನು ಸಂವಾದಕ್ಕೆ ಕರೆಯಲಾಯಿತು. ‘ಧೈ ಅಖರ್ ಪ್ರೇಮ್’ ಪಾದಯಾತ್ರೆ ಭಗತ್ ಸಿಂಗ್ ಅವರ ಜನ್ಮದಿನದಂದು ಪ್ರಾರಂಭವಾಗಿದ್ದು, ಮಹಾತ್ಮ ಗಾಂಧಿಯವರ ಹುತಾತ್ಮ ದಿನದಂದು ಕೊನೆಗೊಳ್ಳಲಿದೆ ಎಂದು ಅವರು ಹೇಳಿದರು. ಇಬ್ಬರೂ ಜಾತ್ಯತೀತ ಭಾರತದ ಕನಸು ಕಂಡವರು. ಹಿಂಸಾಚಾರ ಮತ್ತು ದ್ವೇಷದಿಂದ ದೇಶದ ಮೇಲೆ ದಾಳಿಯಾದಾಗಲೆಲ್ಲ ನಾವು ಅವರಿಬ್ಬರನ್ನೂ ನೆನಪಿಸಿಕೊಳ್ಳುತ್ತೇವೆ. ಪ್ರೀತಿ ಮತ್ತು ಅಹಿಂಸೆ ಮನುಷ್ಯನನ್ನು ಧೈರ್ಯವಂತನನ್ನಾಗಿ ಮಾಡುತ್ತದೆ. ಹಿಂಸೆ ಹೇಡಿಗಳ ಸಾಧನವಾಗಿದೆ. ಗಾಂಧಿ ಭಾರತದ ನೈತಿಕ ಅಧಿಕಾರ. ಮಾರುಕಟ್ಟೆಯು ನಿಮ್ಮನ್ನು ಓಡಿಸುತ್ತದೆ, ಗಾಂಧಿ ನಿಮಗೆ ಭರವಸೆಯನ್ನು ನೀಡುತ್ತಾರೆ.

ಕಪಿಲಾ ಜಿ, ಅನಿತಾ ನಿಧಿ, ಕಪಿಲೇಶ್ವರ್ ಜಿ ಅವರನ್ನು ವೇದಿಕೆಗೆ ಆಹ್ವಾನಿಸಿ ಸನ್ಮಾನಿಸಲಾಯಿತು. ಇದಾದ ಬಳಿಕ ರೈತನ ಸಂಕಷ್ಟವನ್ನು ಗಮನದಲ್ಲಿಟ್ಟುಕೊಂಡು ಬೊಂಬೆ ಕುಣಿತವನ್ನು ಪ್ರಸ್ತುತಪಡಿಸಲಾಯಿತು. ‘ಭೈಯಾ ರೇ ಭೈಯಾ, ಹ್ಯಾಮ್ ಟು ಬ್ಯಾನಲ್ ಹೀ ಕಿಸಾನ್, ಹಮಾರಾ ಬೀಟಾ ಭೂಖಲೆ ಸೂಟೆ ರೇ ರಾಮ್.’ ನಂತರ ಛತ್ತೀಸ್‌ಗಢದ ನಾಚಾ-ಗಮ್ಮತ್ ಜಾನಪದ ಶೈಲಿಯ ನಾಟಕವನ್ನು ಪ್ರಸ್ತುತಪಡಿಸಲಾಯಿತು. ನಿಸಾರ್ ಅಲಿ ಮತ್ತು ದೇವನಾರಾಯಣ ಸಾಹು ರಾಯ್‌ಪುರ ಛತ್ತೀಸ್‌ಗಢದಿಂದ ಬಂದವರು. ಮೆರವಣಿಗೆಯುದ್ದಕ್ಕೂ ಅವರು ಗುಂಪಿನೊಂದಿಗೆ ಇದ್ದರು. ಈ ನಾಟಕದ ಮೂಲಕ ಅವರು ಗಾಂಧೀಜಿಯ ಮೌಲ್ಯಗಳನ್ನು ಹರಡಲು ಪ್ರಯತ್ನಿಸಿದರು. ಇದರೊಂದಿಗೆ ನಾಟಕದ ಮೂಲಕ ಭಗತ್ ಸಿಂಗ್ ತತ್ವಗಳನ್ನೂ ಪ್ರಕಟಿಸಿದರು. ನಡುನಡುವೆ ಕಬೀರ್ ಮತ್ತು ರಹೀಮ್ ಅವರ ಪದ್ಯಗಳ ಜೊತೆಗೆ ಆದಮ್ ಗೊಂಡ್ವಿಯವರ ಗಜಲ್ ಗಳನ್ನು ಓದುತ್ತಿದ್ದರು. “ಜೀವನ್ ಯದು ರಾಹಿಯವರ ‘ರಹೋಂ ಪರ್ ಗುಲಾಂ ಹಮಾರಿ ಭೂಖ್ ನಹಿ ಹೋ ಪೈಗೆ’ ಎಂಬ ಹಾಡಿನೊಂದಿಗೆ ನಾಟಕ ಮುಕ್ತಾಯವಾಯಿತು. ಸಮಾರೋಪ ಸಮಾರಂಭದಲ್ಲಿ ಕೊನೆಯ ಕಾರ್ಯಕ್ರಮವೆಂದರೆ ‘ಧೈ ಅಖರ್ ಪ್ರೇಮ್ ಕೆ ಪಡನೆ ಔರ್ ಪಡಾನೇ ಆಏ ಹೈ, ಹಮ್ ಭಾರತ್ ಸೆ ನಾಫರಾತ್ ಕ ಹರ್ ದಾಗ್ ಮಿತಾನೆ ಆಏ ಹೈ.

ಕೊನೆಯಲ್ಲಿ ಮಂಕೇಶ್ವರ ಪಾಂಡೆ ವಂದಿಸಿದರು. ಸುಮಾರು ಮೂರೂವರೆ ಗಂಟೆಗಳ ಕಾಲ ನಡೆದ ಯಶಸ್ವಿ ಕಾರ್ಯಕ್ರಮದ ನಂತರ ತಂಡದ ಮೆರವಣಿಗೆ ಕೊನೆಗೊಂಡಿತು. ಗೆಳೆಯರೆಲ್ಲ ಒಬ್ಬರನ್ನೊಬ್ಬರು ಭೇಟಿಯಾಗಿ ಮುಂದಿನ ನಿಲ್ದಾಣದಲ್ಲಿ ಭೇಟಿಯಾಗುವ ಭರವಸೆ ನೀಡಿ ಬೇರೆಯಾದರು.

ಈ ಯಾತ್ರೆಯ ಪಾಲುದಾರ ಸಂಘಟನೆಗಳು

ಭಾರತೀಯ ಜನ ನಾಟ್ಯ ಸಂಘ IPTA ಬಿಹಾರ, ಭಾರತೀಯ ಜನ ವಿಕ್ಲಾಂಗ್ ಸಂಘ ಮೋತಿಹಾರಿ, ಬಿಹಾರ ಮಹಿಳಾ ಸಮಾಜ, ದಲಿತ ಅಧಿಕಾರ ಮಂಚ್ ಪಾಟ್ನಾ, ಐಡಿಯಾ ಮೋತಿಹಾರಿ, ಜನ ಸಂಸ್ಕೃತಿ ಮಂಚ್ ಬಿಹಾರ್, ಜನವಾದಿ ಬರಹಗಾರರ ಸಂಘ ಬಿಹಾರ, ಕ್ರಿಶಕ್ ಮೋತಿ ವಿಕಾಸ್. ಪರಿಷತ್ತು., ಮಹಾತ್ಮ ಗಾಂಧಿ ಲೋಮರಾಜ್ ಸಿಂಗ್ ಲೈಬ್ರರಿ ಪಟ್ಟಿ ಜಸೌಲಿ, ಪ್ರಗತಿಪರ ಬರಹಗಾರರ ಸಂಘ ಬಿಹಾರ, ಸೀತಾರಾಮ್ ಆಶ್ರಮ ಬಿಹ್ತಾ ಪಟ್ನಾ ಮತ್ತು ಪ್ರೇರಣಾ (ಪೀಪಲ್ಸ್ ಕಲ್ಚರಲ್ ಫ್ರಂಟ್) ಪ್ರಮುಖವಾಗಿವೆ.

ಮಹಾತ್ಮ ಗಾಂಧಿಯವರಿಗೆ ಜಯವಾಗಲಿ!
ಭಗತ್ ಸಿಂಗ್ ಚಿರಾಯುವಾಗಲಿ!
ಭಾರತದ ಸಂಯೋಜಿತ ಸಾಂಸ್ಕೃತಿಕ ಏಕತೆ ಚಿರಾಯುವಾಗಲಿ!

(ಸತ್ಯೇಂದ್ರ ಕುಮಾರ್ ಅವರು ಧೈ ಅಖರ್ ಪ್ರೇಮ್ ಬಿಹಾರ ರಾಜ್ಯ ಸಾಂಸ್ಕೃತಿಕ ಪಾದಯಾತ್ರೆಯ ದೈನಂದಿನ ವರದಿಯನ್ನು ಸಿದ್ಧಪಡಿಸುತ್ತಿದ್ದರು ಮತ್ತು ಫೋಟೋಗಳು ಮತ್ತು ವೀಡಿಯೊಗಳನ್ನು ದಿನೇಶ್ ಶರ್ಮಾ ಮತ್ತು ನಿಸಾರ್ ಅಲಿ ಅವರು ಒದಗಿಸಿದ್ದಾರೆ. ಇದನ್ನು ಉಷಾ ಆಥ್ನೆ ಸಂಕಲಿಸಿದ್ದಾರೆ)

ಅನುವಾದ: ಇರ್ಫಾನ್ ಅಹಮದ್

View Photos of Bihar Jatha | View Videos of Bihar Jatha

Spread the love
%d bloggers like this: